ಉದಯವಾಹಿನಿ, ಮಂಗಳೂರು: ‘ಉಳ್ಳಾಲ ವಿಧಾನ ಸಭಾ ಕ್ಷೇತ್ರದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕೋಟೆಪುರ- ಬೋಳಾರ ನಡುವೆ ಹಾಗೂ ಸಜಿಪ ತುಂಬೆ ನಡುವೆ ಹೊಸ ಸೇತುವೆ ನಿರ್ಮಿಸುವ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕೋಟೆಪುರ- ಬೋಳಾರ ನಡುವಿನ ಸೇತುವೆ 1,450 ಮೀ ಉದ್ದ ಇರಲಿದೆ. ರಾಷ್ಟ್ರೀಯ ಹೆದ್ದಾರಿ ಹೊರತಾಗಿ ಇಷ್ಟೊಂದು ಉದ್ದದ ಸೇತುವೆ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವುದು ಇದೇ ಮೊದಲು. ಈಗಿನ ನೇತ್ರಾವತಿ ಸೇತುವೆಗೆ ಸಮಾನಾಂತರವಾಗಿ ನಿರ್ಮಾಣವಾಗಲಿರುವ ಈ ಸೇತುವೆಯು, ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗುವ ವಾಹನ ದಟ್ಟಣೆಯನ್ನು ಶೇ 50ರಷ್ಟು ಕಡಿಮೆ ಮಾಡಲಿದೆ’ ಎಂದರು. ‘ಈಗಿರುವ ನೇತ್ರಾವತಿ ಸೇತುವೆ ನಿರ್ಮಾಣಕ್ಕೂ ಮುನ್ನ ಕೇರಳದಿಂದ ಬರುವ ವಾಹನಗಳು ಉಳ್ಳಾಲದ ಕೋಟೆಪುರದಲ್ಲಿ ನಿಲ್ಲುತ್ತಿದ್ದವು. ಮೀನು ಹಾಗೂ ಆಹಾರ ವಸ್ತುಗಳು ಬೋಳಾರದಿಂದ ಕೋಟೆಪುರಕ್ಕೆ ಬಾರ್ಜ್ ಮೂಲಕ ರವಾನೆಯಾಗುತ್ತಿದ್ದವು. ಅಲ್ಲಿಂದ ಅವುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದರು. ನೇತ್ರಾವತಿ ಸೇತುವೆ ನಿರ್ಮಾಣವಾದ ಬಳಿಕ ಕೋಟೆಪುರ ಅಭಿವೃದ್ಧಿ ಕುಂಠಿತವಾಗಿದ್ದು, ಅದನ್ನು ಪುನರುಜ್ಜಿವನಗೊಳಿಸಬೇಕಿದೆ ಎಂದರು.
