ಉದಯವಾಹಿನಿ, ಮುಂಡರಗಿ: ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಜಿಲ್ಲೆಯ ಜವಾಹರ ನವೋದಯ ವಿದ್ಯಾಲಯವು 25ವಸಂತಗಳನ್ನು ಪೂರೈಸಿ ರಜತೋತ್ಸವದ ಸಮಾರಂಭದ ಸಂಭ್ರಮದಲ್ಲಿದೆ. ಡಿ.29ರಂದು ಶಾಲಾ ಆವರಣದಲ್ಲಿ ರಜತಮಹೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಶಾಲೆಯು ಮದುವಣಗಿತ್ತಿಯಂತೆ ಅಲಂಕಾರಗೊಂಡಿದೆ.
ಮಾಜಿ ಸಚಿವ ಎಸ್.ಎಸ್.ಪಾಟೀಲ ಅವರ ಸತತ ಪ್ರಯತ್ನ ಮತ್ತು ಇಚ್ಛಾ ಶಕ್ತಿಯ ಕಾರಣದಿಂದ ತಾಲ್ಲೂಕಿನಲ್ಲಿ ಜವಾಹರ ನವೋದಯ ವಿದ್ಯಾಲಯ ತಲೆ ಎತ್ತಿದ್ದು, ಶಾಲೆಯು ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವುದು ಎಲ್ಲರಲ್ಲಿ ಸಂತಸ ಮೂಡಿಸಿದೆ. ಅಖಂಡ ಧಾರವಾಡ ಜಿಲ್ಲೆಯು ವಿಭಜನೆಯಾಗಿ ಗದಗ ಜಿಲ್ಲೆಯು ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬಂದಿತು. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ನಿಯಮಾನುಸಾರ ಜಿಲ್ಲೆಗೊಂದು ಜವಾಹರ ನವೋದಯ ವಿದ್ಯಾಲಯ ಮಂಜೂರಾಗಬೇಕಿತ್ತು ಈ ಸಂದರ್ಭದಲ್ಲಿ ಧಾರವಾಡ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎಸ್.ಪಾಟೀಲ ಹಾಗೂ ಅಂದಿನ ಕೊಪ್ಪಳ ಸಂಸದ ಬಸವರಾಜ ರಾಯರಡ್ಡಿ ಅವರು ಗದಗ ಜಿಲ್ಲೆಗೆ ನೂತನ ನವೋದಯ ಶಾಲೆ ಮಂಜೂರು ಮಾಡಬೇಕು ಎಂದು ಅಂದಿನ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಸಚಿವ ಎಸ್.ಆರ್.ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
