ಉದಯವಾಹಿನಿ, ವಿಜಯಪುರ: ಪಟ್ಟಣದ ೧೨ನೇ ವಾರ್ಡಿನಲ್ಲಿ ೧೫ ನೇ ಹಣಕಾಸು ಯೋಜನೆಯಡಿ ಸಿ.ಸಿ.ರಸ್ತೆ ಕಾಮಗಾರಿಗೆ ಶನಿವಾರ ಪುರಸಭೆ ಸದಸ್ಯ ವಿ.ನಂದಕುಮಾರ್ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಪಟ್ಟಣದ ೧೨ ನೇ ವಾರ್ಡಿನ ಬಹಳಷ್ಟು ರಸ್ತೆಗಳು ಹದಗೆಟ್ಟಿದ್ದು, ಕೆಲವು ರಸ್ತೆಗಳಿಗೆ ೧೫ನೇ ಹಣಕಾಸು ಯೋಜನೆಯಡಿಯಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಕೆಲವು ರಸ್ತೆಗಳನ್ನು ನಗರೋತ್ತಾನ ಯೋಜನೆಯಡಿ ಮಾಡಲು ಕ್ರೀಯಾಯೋಜನೆಯಲ್ಲಿ ಸೇರಿಸಿದ್ದೇವೆ. ಆದರೆ, ಇದುವರೆಗೂ ನಗರೋತ್ತಾನ ಯೋಜನೆಯ ಕ್ರೀಯಾಯೋಜನೆಗೆ ಟೆಂಡರ್ ಪ್ರಕ್ರಿಯೆ ಮುಗಿದ್ದಿದ್ದರೂ ಇದುವರೆಗೂ ಕಾಮಗಾರಿ ಆರಂಭಿಸಿಲ್ಲ. ಈ ಕುರಿತು ಸಚಿವರಿಗೂ ಮನವಿ ಮಾಡಿದ್ದೇವೆ. ಕೆಡಿಪಿ ಸಭೆಯಲ್ಲೂ ಪ್ರಸ್ತಾಪ ಮಾಡಿದ್ದೇವೆ. ಶೀಘ್ರವಾಗಿ ಕಾಮಗಾರಿ ಆರಂಭಿಸಿದರೆ ಅನುಕೂಲವಾಗಲಿದೆ. ಸಿ.ಸಿ.ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವಂತೆ ಗುತ್ತಿಗೆದಾರರಿಗೆ ಸಲಹೆ ನೀಡಿದರು.
ಸ್ಥಳೀಯ ನಿವಾಸಿ ಗೋವಿಂದರಾಜು ಮಾತನಾಡಿ, ಹಲವು ವರ್ಷಗಳಿಂದ ನಮ್ಮ ವಾರ್ಡಿನಲ್ಲಿ ವ್ಯವಸ್ಥಿತವಾದ ಚರಂಡಿ ವ್ಯವಸ್ಥೆಯಿಲ್ಲ, ರಸ್ತೆಗಳೂ ಸರಿಯಿಲ್ಲ, ಮಳೆ ಬಂದರೆ ಮಳೆಯ ನೀರು ಹರಿದುಹೋಗುವುದಕ್ಕೂ ಜಾಗವಿಲ್ಲದಂತಾಗಿದೆ. ನಾವು ಹಲವಾರು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿರಲಿಲ್ಲ. ಈಗ ೧೫ ನೇ ಹಣಕಾಸು ಯೋಜನೆಯಡಿ ರಸ್ತೆ ಕಾಮಗಾರಿ ಮಾಡುತ್ತಿರುವುದು ಸಮಾಧಾನ ತಂದಿದೆ.
