ಉದಯವಾಹಿನಿ, ಸಕಲೇಶಪುರ: ತಾಲ್ಲೂಕಿನ ಹಲಸುಲಿಗೆ, ಹಸಿಡೆ, ಉದೇವಾರ, ಹೊಸಕೊಪ್ಪಲು ಸೇರಿದಂತೆ ಹಲಸುಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆಗಳು ನಿರಂತರ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಮಾಡಿವೆ. ಗ್ರಾಮದ ತೋಟದಲ್ಲಿ ಸುಮಾರು 30ಕ್ಕೂ ಹೆಚ್ಚು ಅಡಿಕೆ, 50ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ತುಳಿದು ಮುರಿದು, ಸಿಗಿದು ನಾಶಪಡಿಸಿವೆ. ಅಲ್ಲದೆ, ಕೊಯ್ದು ಮಾಡಲು ಸಿದ್ಧವಾಗಿರುವ ಕಾಫಿ ಫಸಲು ಸಹ ಆನೆಗಳು ತೋಟದೊಳಗೆ ಓಡಾಡುತ್ತಿರುವುದರಿಂದ ನೆಲ್ಲಕ್ಕುರುಳಿ ಭಾರೀ ಪ್ರಮಾಣದ ನಷ್ಟ ಉಂಟಾಗುತ್ತಿದೆ ಎಂದು ದಯಾನಂದ್ ಎಂಬುವರು. ಸಿಡಗಳಲೆ, ಹೊಸಕೊಪ್ಪಲು ಹಾಗೂ ಸುತ್ತಮುತ್ತ ಸುಮಾರು 10ಕ್ಕೂ ಹೆಚ್ಚು ಕಾಡಾನೆ ಹಿಂಡು ಹಲವು ದಿನಗಳಿಂದ ಬೀಡುಬಿಟ್ಟಿವೆ. ತೋಟದೊಳಗೆ ಹೋಗಿ ಕಾಫಿ ಕೊಯ್ದು ಮಾಡುವುದಕ್ಕೆ ಜೀವ ಭಯ ಇರುವುದರಿಂದ ಕಾರ್ಮಿಕರೂ ಕೊಯ್ದು ಮಾಡಲು ಬರುತ್ತಿಲ್ಲ ಪೂರ್ತಿ ಹಣ್ಣಾಗಿರುವ ಫಸಲು ಗಿಡದಲ್ಲಿಯೇ ಒಣಗಿ ಮಣ್ಣು ಪಾಲಾಗುತ್ತಿದೆ ಎಂದು ಸಿಡಗಳಲೆ ಗ್ರಾಮದ ರೈತ ರೇಣುಕಾ ಪ್ರಸಾದ್ ಸಮಸ್ಯೆ ಹೇಳಿಕೊಂಡರು.
