ಉದಯವಾಹಿನಿ, ಚಿಕ್ಕಜಾಜೂರು: ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಹೋಬಳಿ ಹಾಗೂ ಚಿಕ್ಕಜಾಜೂರು ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಸ್ಥಿತಿ ಅದೋಗತಿಗೆ ತಲುಪಿವೆ. ಈ ಭಾಗದ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು, ಪ್ರಯಾಣಿಕರ ಪರದಾಟ ಸಾಮಾನ್ಯ ಎಂಬಂತಾಗಿದೆ. ತಾಲ್ಲೂಕು ಕೇಂದ್ರದಿಂದ ಹೊಸದುರ್ಗ-ದಾವಣಗೆರೆ ಮಾರ್ಗದಲ್ಲಿ ಸಿಗುವ ಆಡನೂರು ಬಾಣಗೆರೆ, ಚಿಕ್ಕಜಾಜೂರು, ಬಿ. ದುರ್ಗ, ಸಾಸಲು, ಸಾಸಲುಹಳ್ಳ, ಅಂದನೂರು, ಬಂಡಬೊಮ್ಮೇನಹಳ್ಳಿ ಮುಖ್ಯ ರಸ್ತೆ, ಸಾಸಲುಹಳ್ಳದಿಂದ ಸಂತೇಬೆನ್ನೂರು ಮಾರ್ಗದ ರಸ್ತೆ, ಚಿಕ್ಕಜಾಜೂರು ಸಮೀಪದ ಕಾಶಿಪುರದಿಂದ ಲಿಂಗದಹಳ್ಳಿಗೆ ಹೋಗುವ ಸಂಪರ್ಕ ರಸ್ತೆ, ಟಿ.ತಿರುಮಲಾಪುರದಿಂದ ಟಿ. ನುಲೇನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನಿರಂತರ ಮಳೆಯಿಂದಾಗಿ ಗುಂಡಿಗಳು ಸೃಷ್ಟಿಯಾಗಿವೆ.
ಕಳೆದ ವಾರವಷ್ಟೇ ಲೋಕೋಪಯೋಗಿ ಇಲಾಖೆಯವರು ತಾಲ್ಲೂಕು ಕೇಂದ್ರದಿಂದ ಸಾಸಲು ಗ್ರಾಮದವರೆಗಿನ ಮುಖ್ಯ ರಸ್ತೆಗೆ ಮಣ್ಣು ಹಾಕಿಸಿ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಂಡಿದ್ದರು. ಆದರೆ ಇದು ಶಾಶ್ವತ ಪರಿಹಾರ ಅಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಪಘಾತಗಳಿಗೆ ಆಹ್ವಾನ: ಸಮೀಪದ ಕಾಶಿಪುರದಿಂದ ಲಿಂಗದಹಳ್ಳಿ ಸಂಪರ್ಕ ರಸ್ತೆ ಹಾಗೂ ಟಿ.ತಿರುಮಲಾಪುರದಿಂದ ಟಿ. ನುಲೆನೂರು ಸಂಪರ್ಕ ರಸ್ತೆಗಳ ಕಥೆಯಂತೂ ಹೇಳತೀರದಾಗಿದೆ. ಗುಂಡಿಮಯ ರಸ್ತೆಗಳಲ್ಲಿ ಆಯತಪ್ಪಿ ಬಿದ್ದು ವಾಹನ ಸವಾರರು ಗಾಯಗೊಂಡ ನಿದರ್ಶನಗಳೂ ಸಾಕಷ್ಟಿವೆ. ‘ಲಿಂಗದಹಳ್ಳಿ-ಕಾಶಿಪುರ ರಸ್ತೆಯಲ್ಲಿ ಸರಾಸರಿ ಹತ್ತು ಮೀಟರ್‌ಗೆ ಒಂದರಂತೆ ಗುಂಡಿ ಎದುರಾಗುತ್ತವೆ. ಚಿಕ್ಕಜಾಜೂರು ಮತ್ತು ಚಿತ್ರಹಳ್ಳಿ ಮೂಲಕ ಹೊಳಲ್ಕೆರೆಗೆ ಹೋಗುವ ವಾಹನ ಸವಾರರಿಗೆ ಈ ರಸ್ತೆ ಸವಾಲಾಗಿದೆ.
