ಉದಯವಾಹಿನಿ, ಬಳ್ಳಾರಿ : ಛಲವಾದಿ ಮಹಾಸಭಾ ಜಿಲ್ಲಾ ಸಮಿತಿಯು ನಗರದ ಬಿ ಗೋನಾಳ್ 17 ನೇ ವಾರ್ಡ್ ನಲ್ಲಿ ಭೀಮಾಕೋರೆ ಗಾಂವ್ ವಿಜಯೋತ್ಸವದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಭೀಮ ಕೋರೆಗಾಂವ್ ಸ್ಥಂಭದ ಭಾವಚಿತ್ರಕ್ಕೆ, ಹೂಮಾಲೆ ಅರ್ಪಿಸಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ ಶಿವಕುಮಾರ್, ಜನವರಿ 1, ಜಗತ್ತಿಗೆ ಹೊಸ ವರ್ಷದ ಸಂಭ್ರಮಾಚಾರಣೆಯಾದರೆ ಶೋಷಿತರ ಪಾಲಿಗೆ ಇದು ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದು ವಿಜಯ ಸಾಧಿಸಿದ ಮಹಾರ್ ಯೋಧರ ಶೌರ್ಯದ ದಿನ.
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬದುಕಿನಲ್ಲಿ ಮುಖ್ಯ ಪ್ರೇರಣೆ ನೀಡಿದ ಈ ದಿನವು ನಮ್ಮೆಲ್ಲರ ಪಾಲಿಗೆ ವಿಜಯೋತ್ಸವದ ದಿನವಾಗಿದೆ. ಕ್ರಿಶ. 1800 ರ ಸಂದರ್ಭದಲ್ಲಿ ಮಹರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿದ್ದ ಪೇಶ್ವಗಳು ಮನು ಸಂವಿಧಾನವನ್ನು ಜಾರಿಗೆ ತರುವ ಮೂಲಕ ಅಸ್ಪೃಶ್ಯರ ಜೀವನವನ್ನು ಕಠೋರವಾಗಿಸಿದ್ದರು. ಸಾರ್ವಜನಿಕ ಕೆರೆಗಳನ್ನು ಬಳಸದಂತೆ ನಿರ್ಬಂಧ ಹೇರಲಾಗಿತ್ತು. ಅಮಾನುಷ ಕೃತ್ಯಗಳನ್ನು ನಡೆಸುತ್ತಿದ್ದ ಪೇಶ್ವಗಳ ದೌರ್ಜನ್ಯ ದಬ್ಬಾಳಿಕೆಯಿಂದ ರೋಸಿ ಹೋಗಿದ್ದ ಅಸ್ಪೃಶ್ಯರು ತಮ್ಮ ಜನಾಂಗದ ಮುಕ್ತಿಗಾಗಿ ಹಾತೊರೆಯುತ್ತಿದ್ದರು.
