ಉದಯವಾಹಿನಿ, ಬೆಂಗಳೂರು: ಮಾಹಿತಿ ತಂತ್ರಜ್ಞಾನದ ಮೂಲಕ ವಿಶ್ವದ ಗಮನ ಸೆಳೆದು ಸಿಲಿಕಾನ್‌ ವ್ಯಾಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಮುಕುಟ ಪ್ರಾಯಕ್ಕೆ ಮತ್ತೊಂದು ಗರಿ ಸಿಕ್ಕಿದೆ.
ಅದೇನೆಂದರೆ, ಭಾರತದಲ್ಲೇ ಕರ್ನಾಟಕದ ರಾಜಧಾನಿ ಬೆಂಗಳೂರು ಮಹಿಳೆಯರ ಕೆಲಸಕ್ಕೆ ಅತ್ಯಂತ ಸುರಕ್ಷಿತ ತಾಣ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.
2024ರಲ್ಲಿ ನಡೆದ ಸಮೀಕ್ಷೆಯ ವರದಿಯಂತೆ, ಬೆಂಗಳೂರು ನಗರವು ತಮಿಳುನಾಡು ರಾಜಧಾನಿ ಚೆನ್ನೈಯನ್ನು ಹಿಂದಿಕ್ಕಿ ಉದ್ಯೋಗ ನಿರತ ಮಹಿಳೆಯರಿಗೆ ಅತ್ಯುತ್ತಮ ಮತ್ತು ಸುರಕ್ಷಿತ ನಗರ ಎಂಬ ಪಟ್ಟ ಗಳಿಸಿಕೊಂಡಿದೆ. ಹೆಚ್ಚಿನ ಸಂಬಳದ ಉದ್ಯೋಗಗಳು ಮತ್ತು ಕೈಗೆಟುಕುವ ಐಷಾರಾಮಿ ಜೀವನ ಶೈಲಿಯಿಂದ ಜಾಗತಿಕ ಸಮುದಾಯಕ್ಕೆ ಬೆಂಗಳೂರು ನೆಚ್ಚಿನ ನಗರಿಯಾಗಿದೆ. ಇದರ ಜತೆಗೆ ಕೌಲಾಲಂಪುರ, ಲಿಸ್ಬನ್‌, ದುಬೈ, ಮೆಕ್ಸಿಕೋ ಸಿಟಿ ಮತ್ತು ರಿಯೊ ಡಿ ಜನೈರೊ ನಗರಗಳು ಕೂಡ ವಿಕಸನಶೀಲವಾಗುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅವರ್ತಾ ಗ್ರೂಪ್‌ ನಡೆಸಿದ ಟಾಪ್‌ ಸಿಟಿಸ್‌‍ ಫಾರ್‌ ವುಮನ್‌ ಇನ್‌ ಇಂಡಿಯಾ ಸಮೀಕ್ಷೆಯಲ್ಲಿ, ದೇಶದ ಒಟ್ಟು 25 ನಗರಗಳ ಪೈಕಿ ದಕ್ಷಿಣ ಭಾರತದ 16 ನಗರಗಳು ಸ್ಥಾನ ಪಡೆದುಕೊಂಡಿವೆ. ಈ ಪೈಕಿ ಬೆಂಗಳೂರು ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿರುವುದು ಸಮಸ್ತ ಕನ್ನಡಿಗರಿಗೆ ಹೆಮೆಯ ಸಂಗತಿಯಾಗಿದೆ. ಇನ್ನು ಉದ್ಯೋಗ ನಿರತ ಮಹಿಳೆಯರಿಗೆ ಅತ್ಯುತ್ತಮ ನಗರ ಪಟ್ಟಿಯಲ್ಲಿ ಮಹಾರಾಷ್ಟ್ರ ರಾಜಧಾನಿ 3ನೇ ಸ್ಥಾನದಲ್ಲಿದ್ದರೆ, ರಾಷ್ಟ್ರ ರಾಜಧಾನಿ ಹೊಸದಿಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

 

Leave a Reply

Your email address will not be published. Required fields are marked *

error: Content is protected !!