ಉದಯವಾಹಿನಿ, ಬೆಂಗಳೂರು, : ಪ್ರಾಣ ಬೇಕಾದ್ರೂ ಕೊಡುತ್ತೇವೆ ಆದರೆ ಮೀಸಲಾತಿ ಮುಟ್ಟಿದರೇ ಸಹಿಸಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಮಾಜಿ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೀಸಲಾತಿ ವಿಚಾರಕ್ಕೆ ಬಂದರೆ ಶಾಸಕರ ಮನೆಗಳಿಗೆ ನುಗ್ಗುವಂತಹ ಕೆಲಸ ಕೂಡ ಆಗುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಮೀಸಲಾತಿ ಮುಟ್ಟಿದರೆ ಜನರು ಮುಂದೆ ಬೀದಿಗಿಳಿಯುತ್ತಾರೆ. ಎಂತಹ ಪರಿಸ್ಥಿತಿಯಾದರೂ ಸರಿ ಜೀವ, ಪ್ರಾಣ ಬೇಕಾದರೆ ಕೊಡುತ್ತೇವೆ. ಆದರೆ ಮೀಸಲಾತಿ ಮುಟ್ಟುವವರನ್ನು, ತೆಗೆಯುವವರನ್ನು ಸಹಿಸಲ್ಲ ಎಂದು ಶ್ರೀರಾಮುಲು ಎಚ್ಚರಿಸಿದ್ದಾರೆ.ಇನ್ನೂ ಜಾತಿ ಜನಗಣತಿ ಬಹಳ ಹಳೆಯದ್ದು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಅದನ್ನು ಸ್ವೀಕಾರ ಮಾಡಲು ಒಪ್ಪಿರಲಿಲ್ಲ. ಅವರೇ ಮುಖ್ಯಮಂತ್ರಿ ಆಗಿದ್ದರು, ಅವರೇ ಯಾರನ್ನೋ ಚೇರ್ಮನ್ ಕೂಡಾ ಮಾಡಿಕೊಂಡಿದ್ದರು. ಅವರು ಕೊಟ್ಟ ವರದಿಯನ್ನೇ ಸ್ವೀಕಾರ ಮಾಡಲು ರೆಡಿ ಇರಲಿಲ್ಲ. ಇವತ್ತು ಜಾತಿ ಜನಗಣತಿ ಬಗ್ಗೆ ಮಾತಾಡಿದರೆ ಎಲ್ಲಿಗೆ ಹೋಗಿ ನಿಲ್ಲುತ್ತದೆ? ಎಂದು ಪ್ರಶ್ನಿಸಿದ ಅವರು, ಅಧಿಕಾರದಲ್ಲಿ ಇರುವಾಗ ಒಂದು ಮಾತು, ಅಧಿಕಾರದಲ್ಲಿ ಇಲ್ಲದೇ ಇರುವಾಗ ಒಂದು ಮಾತು ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.
