ಉದಯವಾಹಿನಿ, ಬೀಜಿಂಗ್ : ಮಕ್ಕಳ ಬಗ್ಗೆ ಪೋಷಕರು ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಯಾಕೆಂದರೆ ಕೆಲವೊಮ್ಮೆ ಮಕ್ಕಳ ಚೇಷ್ಟೆಯಿಂದ ಇತರರಿಗೆ ತೊಂದರೆಯಾಗುವುದೂ ಇದೆ. ಅಂತೆಯೇ ವಸ್ತು ಪ್ರದರ್ಶನವೊಂದರಲ್ಲಿ ಮಗುವೊಂದು ಆಕಸ್ಮಿಕವಾಗಿ ಗಾಜಿನ ಪೆಟ್ಟಿಗೆಯನ್ನು ಮುಟ್ಟಿ ತಳ್ಳಿದ ಕಾರಣ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಗಾಜಿನ ಒಳಗೆ ಇದ್ದ ಸುಮಾರು 2 ಎರಡು ಕೆಜಿ ತೂಕದ ಮದುವೆಯ ಕಿರೀಟ ಕೆಳಗೆ ಬಿದ್ದ ಪರಿಣಾಮ ಹಾನಿಗೊಳಗಾಗಿದೆ. ಸದ್ಯ ಇದರ ದುರಸ್ತಿ ವೆಚ್ಚ ಸುಮಾರು 51.5 ಲಕ್ಷ ರುಪಾಯಿ ತಲುಪಬಹುದು ಎನ್ನಲಾಗಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಚೀನಾದ ಬೀಜಿಂಗ್‌ನಲ್ಲಿರುಚ ಎಕ್ಸ್ ಮ್ಯೂಸಿಯಂನಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರಿಗಾಗಿ ಮ್ಯೂಸಿಯಂನಲ್ಲಿ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು ಈ ವೇಳೆ ಈ ಘಟನೆ ಸಂಭವಿಸಿದೆ. ಮಾಹಿತಿ ಪ್ರಕಾರ, ಚಿಕ್ಕ ಮಗುವೊಂದು ಅಲ್ಲಿದ್ದ ಗಾಜನ್ನು ಪದೇ ಪದೆ ಸ್ಪರ್ಶಿಸಿದೆ. ಈ ವೇಳೆ ಅಚಾನಕ್ಕಾಗಿ ಗಾಜಿನ ಕವಚ ತಪ್ಪಿ ಕೆಳಗೆ ಬಿದ್ದಿದೆ. ಇದರೊಂದಿಗೆ ಒಳಗಿದ್ದ ಬೆಲೆಬಾಳುವ ಚಿನ್ನದ ಕಿರೀಟವೂ ನೆಲಕ್ಕೆ ಉರುಳಿದೆ. ಈ ಕಿರೀಟವನ್ನು ಸುಮಾರು 2 ಕೆಜಿ ಶುದ್ಧ ಚಿನ್ನದಿಂದ ತಯಾರಿಸಲಾಗಿದೆ. ಇದನ್ನು ಖ್ಯಾತ ಕಲಾವಿದ ಜಾಂಗ್ ಯುಡಾಂಗ್ ಪತ್ನಿ ಸ್ಟಾರ್ ಜಾಂಗ್ ಕೈಯಿ ಅವರಿಗಾಗಿ ವಿವಾಹದ ಉಡುಗೊರೆಯಾಗಿ ವೈಯಕ್ತಿಕವಾಗಿ ವಿನ್ಯಾಸಗೊಳಿಸಿದ್ದಾರೆ. ಈ ದಂಪತಿ ಆಯೋಜಿಸಿದ್ದ ಪ್ರದರ್ಶನದ ಭಾಗವಾಗಿ ಕಿರೀಟವನ್ನು ಇಡಲಾಗಿತ್ತು. ಜ್ಯುವೆಲ್ಲರಿ ತಜ್ಞರ ಪ್ರಕಾರ, ಈ ಕಿರೀಟವನ್ನು ಮೊದಲಿನ ರೂಪಕ್ಕೆ ತರಲು ಕನಿಷ್ಠ 51.5 ಲಕ್ಷ ರುಪಾಯಿ ಖರ್ಚು ಆಗಲಿದೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!