ಉದಯವಾಹಿನಿ, ರಾಯಚೂರು: ಇತ್ತೀಚಿಗಷ್ಟೇ ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ಜಿ.ನಾಯಕ ಅವರ ನಿವಾಸಕ್ಕೆ ಹಿಂಬಾಗಿಲಿನಿಂದ ಅಪರಿಚಿತರು ನುಗ್ಗಿದ್ದರು. ಈ ಪ್ರಕರಣ ಮಾಸುವ ಮುನ್ನವೇ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಪರಾಪೂರ ರಸ್ತೆಯಲ್ಲಿ ಕೈಯಲ್ಲಿ ಬಡಿಗೆ, ಕಬ್ಬಿಣದ ರಾಡ್ ಹಿಡಿದುಕೊಂಡು ಮುಸುದಾರಿಗಳು ಅನುಮಾನಾಸ್ಪದವಾಗಿ ಓಡಾಡಿದ್ದು, ಅನುಮಾನಕ್ಕೆ ಕಾರಣವಾಗಿದೆ ಜೊತೆಗೆ ಜನರು ಆತಂಕಗೊಂಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಓಡಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಪರಿಚಿತರು ಬಾಗಿಲು ಸೇರಿದಂತೆ, ಇನ್ನೀತರ ವಸ್ತುಗಳನ್ನು ಕತ್ತರಿಸುವ ಮಷಿನ್ ಕೂಡ ಹೊಂದಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಮಸ್ಕಿ ಠಾಣೆ ಪೊಲೀಸರು, ಸ್ಥಳೀಯರ ಜೊತೆ ಇಡೀ ರಾತ್ರಿ ಮುಸುಕುದಾರಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಮುಸುಕುದಾರಿಗಳು ಪೊಲೀಸರು ಮತ್ತು ಸ್ಥಳೀಯರ ಕೈಗೆ ಸಿಗದಂತೆ ಪರಾರಿಯಾಗಿದ್ದಾರೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
