ಉದಯವಾಹಿನಿ, ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮಹಮದ್ ಘಜ್ನಿ ಅವರಿಗೆ ಹೋಲಿಕೆ ಮಾಡಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ.
ನೀಡಿರುವ ಹೇಳಕೆ ವಾಪಸ್ ಪಡೆದು ಮೋದಿ ಅವರ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬಿಜೆಪಿ ನಾಯಕರುಗಳು ಒತ್ತಾಯಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ರ್ಯಾಲಿಯಲ್ಲಿ ರೆಡ್ಡಿ ಅವರು, ಪ್ರಧಾನಿ ನರೇಂದ್ರ ಮೋದಿಯನ್ನು ಮಧ್ಯಕಾಲೀನ ಯುಗದ ಟರ್ಕಿ ದಾಳಿಕೋರ ಮಹಮದ್ ಘಜ್ನಿ ಅವರಿಗೆ ಹೋಲಿಕೆ ಮಾಡಿ ಮಾತನಾಡಿದ್ದರು.
ಪ್ರಧಾನಿ ಮೋದಿ ಸಂವಿಧಾನವನ್ನು ಬದಲಾಯಿಸಲು ಮತ್ತು ಉದ್ಯೋಗ ಮೀಸಲಾತಿಯನ್ನು ರದ್ದುಗೊಳಿಸಲು ಪ್ರಯತ್ನಿಸುವ ಮೂಲಕ ಘಜ್ನಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಘಜ್ನಿ ಭಾರತವನ್ನು ಲೂಟಿ ಮಾಡಲು ಮತ್ತು ವಶಪಡಿಸಿಕೊಳ್ಳಲು ಮತ್ತೆ ಮತ್ತೆ ಪ್ರಯತ್ನಿಸಿದ್ದನ್ನು ನಾವು ಇತಿಹಾಸದಲ್ಲಿ ಓದಿದ್ದೇವೆ. ಅದೇ ರೀತಿ ಇಂದು ಪ್ರಧಾನಿ ಮೋದಿ ಸಂವಿಧಾನವನ್ನು ಬದಲಾಯಿಸಲು ಮತ್ತು ಮೀಸಲಾತಿಯನ್ನು ಹಿಂತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿದ್ದರು.ಈ ಹೇಳಿಕೆಯು ಬಿಜೆಪಿಯಿಂದ ವ್ಯಾಪಕ ಖಂಡನೆಗೆ ಗುರಿಯಾಯಿತು, ಹಲವಾರು ನಾಯಕರು ಮತ್ತು ಸಚಿವರು ಇದನ್ನು ನಾಚಿಕೆಗೇಡಿನ ವಿಷಯ ಎಂದು ಕರೆದರು. ಭಾರತ ಮಾತ್ರವಲ್ಲದೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರನ್ನು ವಿದೇಶಿ ದರೋಡೆಕೋರ ಮತ್ತು ಆಕ್ರಮಣಕಾರ ಘಜ್ನಿ ಅವರಿಗೆ ಹೋಲಿಸುವ ಮೂಲಕ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ತಮ ದ್ವೇಷದ ಮನಸ್ಥಿತಿಯನ್ನು ತೋರಿಸಿದ್ದಾರೆ.
