ಉದಯವಾಹಿನಿ, ಕಲಬುರಗಿ: ಸುಮನೆ ಹುಚ್ಚನಂತೆ ರಾಜೀನಾಮೆ ಕೊಟ್ಟಿಲ್ಲ, ಸಮಸ್ಯೆಗಳಂತೂ ಇವೆ, ಕ್ಷೇತ್ರಕ್ಕೆ ಏನೂ ಮಾಡಲಾಗುತ್ತಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ರಾಜಕೀಯ ಸಲಹೆಗಾರರ ಹುದ್ದೆ ತೊರೆದಿದ್ದೇನೆ ಎಂದು ಶಾಸಕ ಬಿ.ಆರ್. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ಒತ್ತಡ ಹೇರಲು ಅಥವಾ ಬ್ಲಾಕ್ಮೇಲ್ ಮಾಡಲು ರಾಜೀನಾಮೆ ನೀಡಿಲ್ಲ. ಅಷ್ಟು ಕೀಳುಮಟ್ಟದ ರಾಜಕಾರಣ ನಾನು ಮಾಡುವುದಿಲ್ಲ. ಶಾಸಕನಾಗಿದ್ದೇ ಅದೃಷ್ಟ. ಎಷ್ಟೋ ಜನರಿಗೆ ಈ ಅವಕಾಶವೂ ಬರುವುದಿಲ್ಲ ಎಂದರು.
ಗ್ಯಾರಂಟಿ ಕಾರಣಕ್ಕಾಗಿ ಅಗತ್ಯದಷ್ಟು ಅನುದಾನ ಕ್ಷೇತ್ರಕ್ಕೆ ಸಿಗುತ್ತಿಲ್ಲ. ಇದು ನನ್ನೊಬ್ಬನ ಸಮಸ್ಯೆಯಲ್ಲ. ಬಹುತೇಕ ಶಾಸಕರು ಇದೇ ರೀತಿಯ ತೊಂದರೆಯಲ್ಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ಶಾಸಕಾಂಗ ಅನರ್ಹ ತಡೆ ಕಾಯ್ದೆ ತಿದ್ದುಪಡಿಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ.
ಈ ಮೊದಲೇ ನಾನು ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದುಕೊಂಡಿದ್ದೆ. ಆದರೆ ಅನರ್ಹತೆಗೆ ಹೆದರಿ ಓಡಿಹೋದ ಎನಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಸುಮನಿದ್ದೆ. ವಿಧಾನಮಂಡಲದಲ್ಲಿ ಅಂಗೀಕರಿಸಲಾದ ಕಾಯಿದೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಹೀಗಾಗಿ ಲಾಭದಾಯಕ ಹುದ್ದೆಯ ಆರೋಪದಿಂದ ಅನರ್ಹವಾಗುವ ಭಯ ಇಲ್ಲ. ಆದರೂ ಈ ಹುದ್ದೆಯಲ್ಲಿದ್ದು ಏನೂ ಮಾಡಲಾಗುವುದಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
