ಉದಯವಾಹಿನಿ, ನವದೆಹಲಿ: ಜಿದ್ದಾಜಿದ್ದಿನ ಕಣವಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗಲಿದೆ.ಬೆಳಿಗ್ಗೆ 8 ಗಂಟೆಗೆ ಒಟ್ಟು 19 ಮತಕೇಂದ್ರಗಳಲ್ಲಿ ಎಣಿಕೆ ಆರಂಭವಾಗಲಿದ್ದು, ಬಹುತೇಕ ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ.
ಮತ ಎಣಿಕೆಗೆ ಚುನಾವಣಾ ಆಯೋಗ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಮತಕೇಂದ್ರಕ್ಕೆ ಅಭ್ಯರ್ಥಿಗಳ ಏಜೆಂಟರು ಹೊರತುಪಡಿಸಿ ಬೇರೆಯವರು ಮತಕೇಂದ್ರದಿಂದ ಆಚೆ ಇರಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮತಎಣಿಕೆ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಹಾಕಲಾಗಿದ್ದು, ಅನಗತ್ಯವಾಗಿ ಒಳಗೆ ಬರುವುದು ಇಲ್ಲವೇ ಎಣಿಕೆ ಕೇಂದ್ರದ ಬಳಿ ಗುಂಪುಗೂಡುವುದನ್ನು ಆಯೋಗ ನಿಷೇಧ ಮಾಡಿದೆ.
ಮತಗಳ ಎಣಿಕೆ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಆಯೋಗವು ಕೆಲವು ಶಾಲೆಗಳಿಗೆ ಮಾತ್ರ ರಜೆಯನ್ನು ಘೋಷಣೆ ಮಾಡಿದೆ. ಉಳಿದಂತೆ ಅನ್ಯ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಸ್ಪಷ್ಟಪಡಿಸಿದೆ.
2015 ಮತ್ತು 2020 ರಲ್ಲಿ ಅಭೂತಪೂರ್ವ ಜನಾದೇಶ ಪಡೆದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಿದ್ದ ಆಮ್ ಆದಿ ಈ ಬಾರಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದೆ. ಮತದಾನ ನಡೆದ ನಂತರ ಸುಮಾರು 12 ಖಾಸಗಿ ಏಜೆನ್ಸಿಗಳು ನಡೆಸಿರುವ ಸಮೀಕ್ಷೆ ಪ್ರಕಾರ, 10 ಏಜೆನ್ಸಿಗಳು ಬಿಜೆಪಿ ಅಧಿಕಾರಕ್ಕೆ ಮರಳಲಿದೆ ಎಂದು ಹೇಳಿದರೆ ಎರಡು ಸಮೀಕ್ಷೆಗಳು ಮಾತ್ರ ಎಎಪಿ ಪುನಃ ಅಧಿಕಾರ ಹಿಡಿಯಲಿದೆ ಎಂದು ಹೇಳಿವೆ.
27 ವರ್ಷಗಳ ನಂತರ ದೆಹಲಿಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಗೆಲ್ಲಲು ಬೇಕಾದ ಎಲ್ಲಾ ರಣತಂತ್ರಗಳನ್ನು ರೂಪಿಸಿತ್ತು.
ಸುಮಾರು 50 ಸಾವಿರಕ್ಕೂ ಹೆಚ್ಚು ಆರ್ಎಸ್ಎಸ್ನ ಕಾರ್ಯಕರ್ತರು ಕಳೆದ ಆರು ತಿಂಗಳಿನಿಂದ ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಅಲೆ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿತ್ತು. ಎಎಪಿಯ ಭ್ರಷ್ಟಾಚಾರ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಜೈಲಿಗೆ ಹೋಗಿದ್ದು ಸಾಲುಸಾಲು ಸಚಿವರ ಭ್ರಷ್ಟಾಚಾರ ಸ್ವತಃ ಕೇಜ್ರಿವಾಲ್ರವರ ಭವ್ಯ ಮನೆ ನಿರ್ಮಾಣ ವಿವಾದಕ್ಕೆ ಕಾರಣವಾಗಿತ್ತು.

 

Leave a Reply

Your email address will not be published. Required fields are marked *

error: Content is protected !!