ಉದಯವಾಹಿನಿ, ಹಾವೇರಿ: ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಭಕ್ತರು ಸೇರುವ ಮೈಲಾರಲಿಂಗೇಶ್ವರ ಜಾತ್ರೆಗೆ ದಿನಗಣನೆ ಶುರುವಾಗಿದ್ದು ಸುಕ್ಷೇತ್ರ ಮೈಲಾರ ಹಾಗೂ ದೇವರಗುಡ್ಡಕ್ಕೆ ಹೋಗಿ ಬರಲು 145 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ಜಿಲ್ಲಾ ಘಟಕದಿಂದ ಪ್ರತಿ ವರ್ಷವೂ ಜಾತ್ರೆಯ ಸಂದರ್ಭದಲ್ಲಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಇರುತ್ತದೆ.
ಈ ವರ್ಷ ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಅತೀ ಹೆಚ್ಚಿನ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸುವ ಸಾಧ್ಯತೆಯಿದೆ. ಹೀಗಾಗಿ, ಸಂಚಾರದಲ್ಲಿ ಯಾವುದೇ ತೊಂದರೆಯಾಗದಂತೆ ಫೆ. 11ರಿಂದ 15ರವರೆಗೆ ಹೆಚ್ಚುವರಿ ಬಸ್‌ಗಳನ್ನು ಸಂಚಾರಕ್ಕೆ ನಿಯೋಜಿಸಲಾಗುತ್ತಿದೆ.
ಜಿಲ್ಲಾ ಕೇಂದ್ರ ಹಾವೇರಿಯಿಂದ, ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಹಾಗೂ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರಕ್ಕೆ ಹೆಚ್ಚುವರಿ ಬನ್‌ಗಳನ್ನು ಬಿಡಲಾಗಿದೆ. ರಾಣೆಬೆನ್ನೂರಿನಿಂದ ದೇವರಗುಡ್ಡ, ಮೈಲಾರಕ್ಕೂ ಬಸ್ಸಿನ ಅನುಕೂಲ ಕಲ್ಪಿಸಲಾಗಿದೆ. ರಾಜ್ಯ-ಹೊರ ರಾಜ್ಯಗಳಿಂದಲೂ ಭಕ್ತರು ಜಾತ್ರೆಗೆ ಬಂದು ಹೋಗುತ್ತಾರೆ. ಈ ಪೈಕಿ ಹಲವರು, ಹಾವೇರಿ ಹಾಗೂ ರಾಣೆಬೆನ್ನೂರು ಮೂಲಕ ಎರಡೂ ಸುಕ್ಷೇತ್ರಕ್ಕೂ ಭೇಟಿ ನೀಡುತ್ತಾರೆ. ಇಂಥವರ ಸಂಚಾರಕ್ಕೆ ಅನುಕೂಲವಾಗಲೆಂದು ಈ ವರ್ಷ ಹೆಚ್ಚುವರಿ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುತ್ತಿದೆ.
