ಉದಯವಾಹಿನಿ, ನವದೆಹಲಿ: ಜೀವನದಲ್ಲಿ ಅಂಕ ಗಳಿಸುವುದೇ ಮಹಾನ್ ಸಾಧನೆಯಾಗುವುದಿಲ್ಲ. ಅದಕ್ಕಿಂತಲೂ ಜ್ಞಾನ ಸಂಪಾದನೆ ಮಾಡುವುದು ಮುಖ್ಯ. ಸಮಯ ನಿರ್ವಹಣೆ, ಕಾರ್ಯತಂತ್ರ, ಸ್ಪರ್ಧಾತಕ ಯುಗಕ್ಕೆ ತಕ್ಕಂತೆ ಸಿದ್ದರಾಗಬೇಕೆಂದು ಪ್ರಧಾನಿ ನರೇಂದ್ರಮೋದಿ ಅವರು ವಿದ್ಯಾರ್ಥಿಗಳಿಗೆ ಕರೆ ಕೊಟ್ಟಿದ್ದಾರೆ. ಪ್ರತಿ ವರ್ಷದಂತೆ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಜೊತೆ ನಡೆಸುವ ಪರೀಕ್ಷಾ ಪೇ ಚರ್ಚಾದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳನ್ನು ಒತ್ತಿ ಹೇಳಿದರು.
ನೀವು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದು, ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗುವುದೇ ನಿಮ ಗುರಿಯಾಗಿರಬಾರದು. ಯಶಸ್ಸು ಸಾಧಿಸುವವರು ನಿಮಗೆ ಆದರ್ಶರಾಗಬೇಕು. ಒಲಿಂಪಿಕ್ ವಿಜೇತೆ ಮೇರಿ ಕೋಮ್, ಪ್ಯಾರ ಒಲಿಂಪಿಕ್ ಚಿನ್ನದ ವಿಜೇತೆ ಅವಾನಿ ಲೇಕಾರ, ಆಧ್ಯಾತಿಕ ನಾಯಕ ಸದ್ಗುರು, ಚಿತ್ರನಟಿ ದೀಪಿಕಾ ಪಡುಕೋಣೆ, ವಿಕ್ರಮ್ ಮಸ್ಸಿ ಮತ್ತಿತರರು ನಿಮಗೆ ಆದರ್ಶಪ್ರಾಯರಾಗಬೇಕೆಂದು ಕಿವಿಮಾತು ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಸಮಯ ಪಾಲನೆ ಮಾಡುವುದು ಅತ್ಯಗತ್ಯ. ಶಿಕ್ಷಕರು ನೀಡುವ ಪಠ ಚಟುವಟಿಕೆಗಳನ್ನು ಅಂದೆಯೇ ಕಲಿಯಬೇಕು. ತಂದೆತಾಯಿಗಳು ಒತ್ತಾಯ ಮಾಡುವ ಯಾವುದೇ ವಿಷಯಗಳ ಬಗ್ಗೆ ಗಮನ ನೀಡಬೇಡಿ. ನಿಮಗೆ ನೀವು ಮನಸಾರೆ ಇಷ್ಟಪಡುವ ವಿಷಯಗಳ ಮೇಲೆ ಹೆಚ್ಚು ಗಮನಹರಿಸಬೇಕು. ಯಾವ ವಿಷಯಗಳನ್ನು ಎಷ್ಟು ಸಮಯದಲ್ಲಿ ಓದಬೇಕು ಎಂಬುದನ್ನು ಮೊದಲೇ ಖಾತ್ರಿಪಡಿಸಿಕೊಂಡು ಸಮಯ ನಿಗದಿಪಡಿಸಿಕೊಳ್ಳಿ ಎಂದು ಸಲಹೆ ಮಾಡಿದರು.
