ಉದಯವಾಹಿನಿ , ಬೆಂಗಳೂರು : ಅಕ್ರಮವಾಗಿ ಹಲವು ವ್ಯಕ್ತಿಗಳ ಫೋನ್ ಕರೆ ದಾಖಲೆಗಳನ್ನು (ಸಿಡಿಆರ್) ಪಡೆದುಕೊಂಡಿರುವ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಫೆ.೧೩ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಅವರು ಐಶ್ವರ್ಯಾ ಗೌಡಗೆ ನೋಟೀಸ್ ನೀಡಿದ್ದಾರೆ. ಮಾಜಿ ಸಂಸದ ಡಿ ಕೆ ಸುರೇಶ್ ಅವರ ಸಹೋದರಿ ಎಂದು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ೫ ಹಾಗೂ ಅವರ ಪತಿಯ ೨ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಡೇಟಾ ಸಂಗ್ರಹಣೆಗಾಗಿ ನ್ಯಾಯಾಲಯದ ಅನುಮತಿ ಪಡೆದು ಪಶ್ಚಿಮ ವಿಭಾಗದ ಸಿಇಎನ್ ಠಾಣೆಗೆ ರವಾನಿಸಿದ್ದರು. ಆ ಫೋನ್‌ಗಳಲ್ಲಿರುವ ಡೇಟಾವನ್ನು ಸಂಗ್ರಹಿಸಿದಾಗ ಅದರಲ್ಲಿ ಹಲವು ವ್ಯಕ್ತಿಗಳ ಫೋನ್ ಕರೆ ದಾಖಲೆಗಳು (ಸಿಡಿಆರ್) ಪತ್ತೆಯಾಗಿದ್ದವು. ವಂಚನೆ ಪ್ರಕರಣದ ತನಿಖಾಧಿಕಾರಿಯಾಗಿರುವ ಎಸಿಪಿ ಭರತ್ ರೆಡ್ಡಿ ಅವರು ನೀಡಿರುವ ದೂರಿನ ಮೇರೆಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಾ ಗೌಡ ಹಾಗೂ ಅವರಿಗೆ ಸಿಡಿಆರ್ ಒದಗಿಸಿದ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
