ಉದಯವಾಹಿನಿ, ಪ್ರಯಾಗರಾಜ್: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಸಂದರ್ಭದಲ್ಲಿ ಈ ವರೆಗೂ 50 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.144 ವರ್ಷಗಳ ನಂತರ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತದೆ.
ಜ.13ರಿಂದ ಫೆಬ್ರವರಿ 14ರವರೆಗೂ ಮಹಾಕುಂಭದಲ್ಲಿ ಸ್ನಾನ ಮಾಡುವವರ ಸಂಖ್ಯೆ 50 ಕೋಟಿ ದಾಟಿದೆ. ಪವಿತ್ರ ಪ್ರಯಾಗ್‌ರಾಜ್‌ನಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಉತ್ತರಪ್ರದೇಶ ಸರ್ಕಾರ ಉತ್ತಮ ವ್ಯವಸ್ಥೆ ಮಾಡಿದೆ. ಹೀಗಾಗಿ ಎಲ್ಲರೂ ಸುರಕ್ಷಿತವಾಗಿ ಸ್ನಾನ ಮಾಡಲು ಸಾಧ್ಯವಾಗುತ್ತಿದೆ. ಫೆ.14ರಂದು ಒಂದೇ ದಿನ ಮಧ್ಯಾಹ್ನ 1 ಗಂಟೆವರೆಗೆ ಸುಮಾರು 55 ಲಕ್ಷ ಜನರು ಮಹಾಕುಂಭದಲ್ಲಿ ಸ್ನಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮಾನವನ ಇತಿಹಾಸದಲ್ಲಿಯೇ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿ ದೊಡ್ಡ ಸಭೆ ಇದಾಗಿದೆ. ಭಾರತದಲ್ಲಿ ಆಳವಾಗಿ ಬೇರೂರಿರುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ನೀತಿಯನ್ನು ಒತ್ತಿ ಹೇಳಿದ ಸಿಎಂ ಯೋಗಿ, ದೇಶದಲ್ಲಿ 110 ಕೋಟಿ ಸನಾತನ ಧರ್ಮದ ಅನುಯಾಯಿಗಳಿದ್ದು, ಇಂತಹ ಬೃಹತ್ ಭಾಗವಹಿಸುವಿಕೆಯು ಸನಾತನ ಧರ್ಮದ ಶಾಶ್ವತ ಮೌಲ್ಯಗಳಲ್ಲಿನ ಅಚಲ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
