ಉದಯವಾಹಿನಿ, ಹುಬ್ಬಳ್ಳಿ: ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರವೇ ಶಿಫಾರಸು ಮಾಡಿದೆ. ಮುಖ್ಯ ಮಂತ್ರಿಗಳು ದರ ಏರಿಕೆ ವಿಚಾರವಾಗಿ ನಿರ್ದೇಶನ ಕೊಟ್ಟಿರುವುದೇ ಅದಕ್ಕೆ ಸಾಕ್ಷಿ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದರಿಂದ ಎಲ್ಲದರ ಏರಿಕೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಅದಕ್ಕೆ ಎಲ್ಲ ದರಗಳನ್ನೂ ಏರಿಸುತ್ತಿದೆ. ಮೆಟ್ರೋ ದರ ಏರಿಕೆ ಮಾಡಿದ್ದು ನಾವಲ್ಲ. ದರ ನಿಗದಿ ಮಾಡುವ ಒಂದು ಸಮಿತಿ ಇದೆ. ಮೆಟ್ರೋ ದರ ವಿಚಾರದಲ್ಲಿ ಎಲ್ಲವೂ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುತ್ತದೆ. ಅದರಲ್ಲಿ ರಾಜ್ಯದ ಅಧಿಕಾರಿಗಳಿರುತ್ತಾರೆ. ಅದಕ್ಕೆ ರಾಜ್ಯ ಸರ್ಕಾರವೇ ಶಿಫಾರಸ್ಸು ಮಾಡಿದೆ. ಮುಖ್ಯ ಮಂತ್ರಿಗಳು ದರ ಏರಿಕೆ ವಿಚಾರವಾಗಿ ನಿರ್ದೇಶನ ಕೊಟ್ಟಿರುವುದೇ ಅದಕ್ಕೆ ಸಾಕ್ಷಿ ಎಂದು ಹೇಳಿದರು.
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದರಿಂದ ಎಲ್ಲದರ ಏರಿಕೆ ಮಾಡುತ್ತಿದೆ. ವಿದ್ಯುತ್, ನೀರು, ಹಾಲಿನ ದರ ಸೇರಿದಂತೆ ಎಲ್ಲ ದರ ಏರಿಸಿದೆ. ಸರ್ಕಾರ ಹಣಕಾಸಿನ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದರು.
ಮೈಸೂರಿನ ಉದಯಗಿರಿ ಗಲಾಟೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವಾಗ ಸರ್ಕಾರ ಹಳೇ ಹುಬ್ಬಳ್ಳಿ ಪ್ರಕರಣವನ್ನು ಹಿಂತೆಗೆದರೋ ಆಗ ಸರ್ಕಾರ ಯಾರ ಪರ ಇದೆ ಎನ್ನುವುದು ಗೊತ್ತಾಗಿದೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವುದರ ಹಿಂದೆ ಯಾರ ಕುಮ್ಮಕ್ಕು ಇದೆ ಎನ್ನುವುದು ಗೊತ್ತಾಗುತ್ತದೆ. ಈ ಹಿಂದೆ ತನ್ವೀರ್ ಸೇಠ್ ಮೇಲೆ ಪಿಎಫ್ ಐ ದಾಳಿ ಮಾಡಿತ್ತು. ಇಂದು ಆ ಶಕ್ತಿಗಳು ಮತ್ತೆ ಒಂದಾಗಿವೆ.

Leave a Reply

Your email address will not be published. Required fields are marked *

error: Content is protected !!