ಉದಯವಾಹಿನಿ,ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ಸಮಾವೇಶಕ್ಕೆ ಪ್ರತಿಯಾಗಿ ಬೃಹತ್ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಲು ಜೆಡಿಎಸ್ ಮುಂದಾಗಿದೆ.ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಕುಗ್ಗಿಲ್ಲ ಎಂಬುದನ್ನು ಸಾಬೀತು ಪಡಿಸುವುದು ಹಾಗೂ ಕಾರ್ಯಕರ್ತರಲ್ಲಿ ಪಕ್ಷ ಸಂಘಟನೆಗೆ ಚೈತನ್ಯ ತುಂಬುವುದು ಸಮಾವೇಶದ ಉದ್ದೇಶ.ಹಳೇ ಮೈಸೂರು ಭಾಗದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನಂತೆ ಜೆಡಿಎಸ್ ಪ್ರಬಲವಾಗಿದೆ ಎಂಬುದನ್ನು ತೋರಿಸುವುದು ಹಾಗೂ ಪಕ್ಷದಿಂದ ದೂರ ಸರಿದಿರುವ ಮುಖಂಡರು ಮತ್ತು ಕಾರ್ಯಕರ್ತರನ್ನು ಮರಳಿ ಪಕ್ಷದತ್ತ ಆಕರ್ಷಿಸುವುದು ಸಮಾವೇಶದ ಹಿಂದಿನ ತಂತ್ರಗಾರಿಕೆಯಾಗಿದೆ.ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟಿದ ಹಬ್ಬ ಮೇ ತಿಂಗಳಲ್ಲಿ ನಡೆಯಲಿದೆ. ಅದೇ ಸಂದರ್ಭದಲ್ಲಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಮಾವೇಶದ ಪೂರ್ವಸಿದ್ಧತೆಗಾಗಿ ಮಾರ್ಚ್ 6ರಂದು ಪಕ್ಷದ ಮುಖಂಡರ ಸಭೆ ಕರೆಯಲಾಗಿದೆ.ಸಭೆಯಲ್ಲಿ ಮೇನಲ್ಲಿ ನಡೆಸಲಿರುವ ಸಮಾವೇಶದ ಹೆಸರು, ಸ್ವರೂಪ, ಸ್ಥಳ ಸೇರಿದಂತೆ ಸಮಗ್ರವಾಗಿ ಚರ್ಚೆ ನಡೆಸಲಾಗುತ್ತದೆ. ಸಿದ್ದತೆಯ ಬಗ್ಗೆ ಪಕ್ಷದ ವರಿಷ್ಠರು ಮುಖಂಡರಿಗೆ ಸಲಹೆ, ಸೂಚನೆ ನೀಡಿ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ.

ಡಿಸೆಂಬರ್‌ನಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮಂಡ್ಯದಲ್ಲಿ ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಕೊನೆ ಕ್ಷಣದಲ್ಲಿ ಸಮಾವೇಶ ನಡೆಸುವುದನ್ನು ರದ್ದುಪಡಿಸಲಾಗಿತ್ತು,ಜೆಡಿಎಸ್‌ ಪ್ರಾಬಲ್ಯವಿರುವ ಮಂಡ್ಯ, ತುಮಕೂರು, ಹಾಸನ ಈ ಮೂರು ಜಿಲ್ಲೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸಮಾವೇಶದ ಸ್ಥಳ ನಿಗದಿ ಮಾಡುವ ಸಾಧ್ಯತೆಗಳಿವೆ.

 

Leave a Reply

Your email address will not be published. Required fields are marked *

error: Content is protected !!