ಉದಯವಾಹಿನಿ,ಬೆಂಗಳೂರು: ಪ್ರಸಕ್ತ 2024-25ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಅನ್ನು ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಪರೀಕ್ಷೆ ನಡೆಸಲು ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ. ದ್ವಿತೀಯ ಪಿಯುಸಿ ಮಾರ್ಚ್ 1 ರಿಂದ 20 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ ಎಂದು ಹೇಳಿದರು.
ಪಿಯುಸಿಗೆ 7,13,862 ವಿದ್ಯಾರ್ಥಿಗಳು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8,96,447 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 5,050 ಕಾಲೇಜುಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 15,881 ಶಾಲೆಗಳು ನೋಂದಾಯಿಸಿಕೊಂಡಿವೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 1171 ಪರೀಕ್ಷಾ ಕೇಂದ್ರಗಳು, 2,342 ಸ್ಥಾನಿಕ ಜಾಗೃತ ದಳಗಳು, 504 ವಿಚಕ್ಷಣ ಜಾಗೃತ ದಳಗಳು, 365 ಪ್ರಶ್ನೆಪತ್ರಿಕಾ ವಿತರಣಾ ಮಾರ್ಗಗಳು, 1,171 ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಉಪ/ಜಂಟಿ ಅಧೀಕ್ಷಕರು, ಉತ್ತರ ಪತ್ರಿಕೆಗಳ/ಪ್ರಶ್ನೆ ಪತ್ರಿಕೆಗಳ ಪಾಲಕರನ್ನು ನೇಮಿಸಲಾಗುತ್ತದೆ.
ಉತ್ತರ ಪತ್ರಿಕೆಗಳ ಮೌಲ್ಯಮಾಪನ 76 ಕೇಂದ್ರಗಳಲ್ಲಿ ನಡೆಯಲಿದ್ದು, 31000 ಮೌಲ್ಯ ಮಾಪಕರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ 2,818 ಪರೀಕ್ಷಾ ಕೇಂದ್ರಗಳು ಹಾಗೂ ಸ್ಥಾನಿಕ ಜಾಗೃತ ಸ್ಥಳಗಳು ಇರಲಿವೆ. ಜಿಲ್ಲಾ ಹಂತದಲ್ಲಿ 410, ತಾಲ್ಲೂಕು ಹಂತದಲ್ಲಿ 1,662, ವಿಚಕ್ಷಣ ಜಾಗೃತ ದಳಗಳು ಇರಲಿವೆ.
1,117 ಪ್ರಶ್ನೆ ಪತ್ರಿಕಾ ವಿತರಣಾ ಮಾರ್ಗಗಳ ಸಂಖ್ಯೆ ಇದ್ದು, 2,818 ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿರುತ್ತಾರೆ. ಉಪ/ಜಂಟಿ ಅಧೀಕ್ಷಕರ ಸಂಖ್ಯೆ 958 ಆಗಿದ್ದು 2818 ಉತ್ತರ ಪತ್ರಿಕೆಗಳ/ಪ್ರಶ್ನೆ ಪತ್ರಿಕೆಗಳ ಪಾಲಕರಿರುತ್ತಾರೆ. 240 ಕೇಂದ್ರದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು 65 ಸಾವಿರ ಮೌಲ್ಯ ಮಾಪಕರು ಮಾಡಲಿದ್ದಾರೆ ಎಂದು ಸಚಿವರು ವಿವರಿಸಿದರು.
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು. ವಿದ್ಯಾರ್ಥಿಗಳು ಯಾವುದೇ ಭಯ, ಆತಂಕವಿಲ್ಲದೆ ಧೈರ್ಯದಿಂದ ಸಂತೋಷದಿಂದ ಪರೀಕ್ಷೆ ಬರೆಯಬಹುದು. ಕಲಿಕೆಯಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿಗಳನ್ನು ವಿಶೇಷ ತರಗತಿಗಳ ಮೂಲಕ ಸಜ್ಜುಗೊಳಿಸಲಾಗಿದೆ. ಈ ಬಾರಿಯೂ 3 ಪರೀಕ್ಷೆಗಳಿರುತ್ತವೆ.
ಯಾವುದೇ ಗ್ರೇಸ್ ಮಾರ್ಕ್ಸ್ ಇರುವುದಿಲ್ಲ. ಕೋವಿಡ್ ಪೂರ್ವದಲ್ಲಿ ಇದ್ದ ನಿಯಮವೇ ಜಾರಿಯಲ್ಲಿರುತ್ತದೆ ಎಂದು ಹೇಳಿದರು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸಲು ಈ ಬಾರಿ ವಿಶೇಷ ಕಾಳಜಿ ವಹಿಸಿದ್ದಾರೆ. ಕಡಿಮೆ ಫಲಿತಾಂಶ ಬಂದಿದ್ದ ಜಿಲ್ಲಾ ಮತ್ತು ತಾಲ್ಲೂಕುಗಳಲ್ಲೂ ಫಲಿತಾಂಶ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!