ಉದಯವಾಹಿನಿ, ಆಲೂರು: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ ಶ್ರೀಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಫೆ. 21ರಿಂದ 25ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.
ಸಾಧಾರಣವಾಗಿ ಎಡಮುರಿ ಗಣಪತಿ ದೇವಸ್ಥಾನಗಳು ಹೆಚ್ಚಾಗಿ ಕಾಣಲು ಸಿಗುತ್ತದೆ.
ಬಲಮುರಿ ಗಣೇಶ ದೇವಸ್ಥಾನಗಳು ವಿರಳ. ಅಂತಹ ಬಲಮುರಿ ಗಣಪತಿ ದೇವಸ್ಥಾನ ಆಲ್ಲೂರಿನಲ್ಲಿ ನಿರ್ಮಾಣವಾಗುತ್ತಿದೆ. ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಲ್ಲೂರಿನ ಭಕ್ತರು ಕಾತರರಾಗಿದ್ದಾರೆ. ದೇವಸ್ಥಾನದ ಲೋಕಾರ್ಪಣೆ ಪೂರ್ವ ಸಿದ್ಧತೆಯಾಗಿ ಶುಕ್ರವಾರ ಮತ್ತು ಶನಿವಾರ ಶ್ರೀಧರ ಭಟ್ ಕೌರಿಕೊಪ್ಪ ಮತ್ತು ದೇವಾಲಯದ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ವಿಶೇಷ ಧಾರ್ಮಿಕ ಪೂಜೆಗಳು ನಡೆಯಲಿವೆ.
ಫೆ. 23ರಂದು ಬೆಳಿಗ್ಗೆ 7.32ಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಭೀಮೇಶ್ವರ ಜೋಶಿ ನೇತೃತ್ವದಲ್ಲಿ ಮಹಾಗಣಪತಿ ಆವಾಹನೆ ಮತ್ತು ಕಳಶಾರೋಹಣ ನಡೆಯಲಿದೆ. ಶೃಂಗೇರಿ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಗುಣನಾಥ ಸ್ವಾಮೀಜಿ, ಮಾಚಗೊಂಡನಹಳ್ಳಿ ಬೇರುಗಂಡಿ ಮಠದ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಸೋಮವಾರ ಬೆಳಿಗ್ಗೆ, 7ಗಂಟೆಗೆ ಪಂಚಾಮೃತ ಅಭಿಷೇಕ ಆರಂಭವಾಗಲಿದ್ದು, 9ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ಆ ದಿನ ಆಲ್ಲೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ತರು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 25ರಂದು ಮಹಾಗಣಪತಿ ದೇವಸ್ಥಾನ ಲೋಕಾರ್ಪಣೆ
ಮತ್ತು ಧಾರ್ಮಿಕ ಮಹಾಸಭಾ ಕಾರ್ಯಕ್ರಮ ಬೆಳಿಗ್ಗೆ 11ಕ್ಕೆ ನಡೆಯಲಿದೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆ, ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವನಾಗಿದೇವ ಶರಣರು, ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆ.
