ಉದಯವಾಹಿನಿ, ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ( ಮೂಡಾ)ದ ಆಕ್ರಮ ನಿವೇಶನ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ತನಿಖಾಧಿಕಾರಿಗಳಿಂದ ಕ್ಲೀನ್ ಚಿಟ್ ಪಡೆದು ನಿರಾಳರಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಏಕೆಂದರೆ, ಲೋಕಾಯುಕ್ತ ತನಿಖಾಧಿಕಾರಿಗಳ ಬಿ ರಿಪೋರ್ಟ್ ವರದಿಯನ್ನು ಪ್ರಶ್ನಿಸಿ ಜಾರಿ ನಿದೇರ್ಶನಾಲಯ (ಇ.ಡಿ) ಮತ್ತು ದೂರುದಾರ ಸ್ನೇಹಮಯಿ ಕೃಷ್ಣ ಅವರುಗಳು ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಇಲ್ಲವೇ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.ಮುಂದಿನ ವಾರ ಇ.ಡಿ ಹಾಗೂ ಸ್ನೇಹಮಯಿ ಕೃಷ್ಣ ಇಬ್ಬರೂ ಪ್ರತ್ಯೇಕವಾಗಿ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಲು ಸಜ್ಜಾಗಿದ್ದಾರೆ. ಇದಕ್ಕಾಗಿ ವಕೀಲರು ಲೋಕಾಯುಕ್ತ ತನಿಖಾ ಅಧಿಕಾರಿಗಳು ಉಲ್ಲೇಖಿಸಿರುವ ಅಂಶಗಳನ್ನು ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಇ.ಡಿ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು, ಈ ಹಿಂದೆ ಲೋಕಾಯುಕ್ತ ತನಿಖಾಧಿಕಾರಿಗಳು ಪ್ರಕರಣವೊಂದೆ ಸಂಬಂಧ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿರುವುದನ್ನು ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಬರುವ ದಿನಗಳಲ್ಲಿ ಇ.ಡಿ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರುವುದು ಖಚಿತವಾಗಿದೆ.
ಮುಖ್ಯಮಂತ್ರಿಗಳ ಪತ್ನಿ 14 ನಿವೇಶನಗಳನ್ನು ಮುಡಾಗೆ ಹಿಂತಿರುಗಿಸಿದ್ದಾರೆ. ಜೆಟ್ ವಿಮಾನದ ವೇಗದಲ್ಲಿ ಆ ಸೈಟ್ಗಳನ್ನು ವಾಪಸ್ ಪಡೆಯಲಾಗಿದೆ. ಸಾಮಾನ್ಯ ಜನ ಹೋದರೆ ತಿಂಗಳಾದರೂ ಕೆಲಸ ಆಗುವುದಿಲ್ಲ. ಸಿಎಂ ಪತ್ನಿ ಮನವಿ ಕೊಟ್ಟರೆ ಆ ಕ್ಷಣವೇ ಕೆಲಸವಾಗಿದೆ. ಪ್ರಕರಣ ದಾಖಲಿಸಿದಾಗ 14 ನಿವೇಶನ ಮುಖ್ಯಮಂತ್ರಿಗಳ ಪತ್ನಿ ವಶದಲ್ಲಿತ್ತು. ಅದು ಅಪರಾಧದ ಸಂಪತ್ತಾಗಿರುವುದರಿಂದ ತನಿಖೆ ನಡೆಯಬೇಕಾದ ಅಗತ್ಯವಿದೆ. ಇ.ಡಿ ಸಮನ್ಸ್‌ನಲ್ಲಿ ಯಾವುದೇ ಆರೋಪಗಳನ್ನು ಮಾಡಿಲ್ಲ, ಮಾಹಿತಿಗಾಗಿ ಜಾರಿಗೊಳಿಸಿದೆ. ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿರಬಹುದು. ಆದರೆ ಕೋರ್ಟ್ ಇನ್ನೂ ಬಿ ರಿಪೋರ್ಟ್ ಅಂಗೀಕರಿಸಿಲ್ಲ. ವರದಿ ಪ್ರಶ್ನಿಸಲು ಇಡಿಗೂ ಅಧಿಕಾರವಿದೆ ಎಂದು ಪೀಠಕ್ಕೆ ವಿವರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಸೇರಿದ 14 ನಿವೇಶನಗಳ ಹಸ್ತಾಂತರದ ಹಿಂದೆ ಹಲವಾರು ಅವ್ಯವಹಾರಗಳು ನಡೆದಿರುವುದಕ್ಕೆ ಸಾಕ್ಷಿಗಳು ಪತ್ತೆಯಾಗಿದೆ ಎಂದು ಇ.ಡಿ(ಜಾರಿ ನಿರ್ದೇಶನಲಯ) ಬಹಿರಂಗಪಡಿಸಿದೆ. ಬೇನಾಮಿ ಹಾಗೂ ಇನ್ನಿತರ ಅವ್ಯವಹಾರಗಳ ಮೂಲಕ 1,098 ನಿವೇಶನಗಳನ್ನು ಆಕ್ರಮವಾಗಿ ಹಂಚಿಕೆ ಮಾಡಲಾಗಿದೆ ಇದರ ಮೌಲ್ಯ ಬರೋಬ್ಬರಿ 700 ಕೋಟಿ ರೂಪಾಯಿ ಎಂದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿತ್ತು.

Leave a Reply

Your email address will not be published. Required fields are marked *

error: Content is protected !!