ಉದಯವಾಹಿನಿ, ಬೆಂಗಳೂರು: ಕಾರ್ಯಕರ್ತರು ಬಯಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿರುವುದು ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದ್ದು, ಅವರ ರಾಜೀನಾಮೆ ಮಾತು ಸಾಕಷ್ಟು ಚರ್ಚೆಗೂ ಕಾರಣವಾಗಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳು ನಡೆಯುತ್ತಿರುವಾಗಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸಿದ್ಧ ಎಂದು ಹೇಳಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಇತ್ತೀಚೆಗಷ್ಟೆ ದೆಹಲಿಗೆ ತೆರಳಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರಾಜ್ಯದಲ್ಲಿ ಒಂದು ವೇಳೆ ಉನ್ನತ ಸ್ಥಾನದ ಬದಲಾವಣೆಯಾದರೆ ತಮ್ಮನ್ನೂ ಪರಿಗಣಿಸಬೇಕು ಎಂಬ ದಾಳವನ್ನು ಉರುಳಿಸಿ ಬಂದಿದ್ದರು. ಹಾಗಾಗಿ ಅವರ ರಾಜೀನಾಮೆ ಮಾತು ಕುತೂಹಲಕ್ಕೆಡೆ ಮಾಡಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ವಿರುದ್ಧದ ಮುಡಾ ಹಗರಣ ಕೇಸು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳು ಇನ್ನಿತರೆ ರಾಜಕೀಯ ವಿಚಾರಗಳು ಈಗಾಗಲೇ ಪಕ್ಷದ ನಾಯಕರು, ಹೈಕಮಾಂಡ್‌ಗೆ ತಲೆನೋವಾಗಿರುವ ಬೆನ್ನಲ್ಲೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕಾರ್ಯಕರ್ತರ ಸಮ್ಮುಖದಲ್ಲಿ ಬೇಸರದಿಂದ ಗೃಹ ಖಾತೆಗೆ ರಾಜೀನಾಮೆ ಕೊಡುವ ಮಾತುಗಳು ಆಡಿರುವುದು ಇದೀಗ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳು ಹೈಕಮಾಂಡ್ ಸಿಟ್ಟಿಗೆ ಕಾರಣವಾಗಿರುವ ಬೆನ್ನಲ್ಲೇ ಮಾಜಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕಾರ್ಯಕರ್ತರ ಸಭೆಯಲ್ಲಿ ಗೃಹ ಖಾತೆಗೆ ರಾಜೀನಾಮೆ ನೀಡುವ ಮಾತುಗಳನ್ನಾಡಿರುವುದು ಕಾಂಗ್ರೆಸ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.ಕಳೆದ ನಾಲ್ಕೈದು ದಿನಗಳ ಹಿಂದೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ಹೋಗಿ ಬಂದಿದ್ದರು. ಬಳಿಕ ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಕಾರ್ಯಕರ್ತರ ಮನದಾಳಕ್ಕೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಹೊರ ಹಾಕಿ, ಗೃಹ ಖಾತೆಗೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!