ಉದಯವಾಹಿನಿ, ಸಕಲೇಶಪುರ: ರಸ್ತೆ ಅಭಿವೃದ್ಧಿಗೊಳಿಸುವಂತೆ ಮಾಡಿದ ಮನವಿಗೆ ಸ್ಪಂದಿಸದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡೆಯಿಂದ ಬೇಸತ್ತು, ಗ್ರಾಮಸ್ಥರೇ ಹಣ ಸಂಗ್ರಹಿಸಿ ಸುಮಾರು ಅರ್ಧ ಕಿ.ಮೀ. ರಸ್ತೆಯನ್ನು ನಿರ್ಮಿಸಿದ್ದಾರೆ.
ತಾಲ್ಲೂಕಿನ ಮಠಸಾಗರ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈಶ್ವರ, ಆಂಜನೇಯ, ಬೀರಲೀಂಗೇಶ್ವರ ಹಾಗೂ ಲಕ್ಷ್ಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಣ್ಣು ಗುಂಡಿಗಳಿಂದ ಕೂಡಿತ್ತು. ಇದನ್ನು ಅಭಿವೃದ್ಧಿಗೊಳಿಸುವಂತೆ ಹಲವು ವರ್ಷಗಳಿಂದ ಗ್ರಾಮಸ್ಮರು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಪ್ರತಿ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ವಾಹನಗಳಿರಲಿ, ನಡೆದುಕೊಂಡು ಹೋಗುವುದಕ್ಕೆ ಸಾಧ್ಯವಾಗದಷ್ಟು ಹಾಳಾಗುತ್ತಿತ್ತು. ಹೀಗಾಗಿ, ಗ್ರಾಮಸ್ಮರೇ ರಸ್ತೆ ನಿರ್ಮಿಸಲು ಮುಂದಾದರು.
ವ್ಯಕ್ತಿಯೊಬ್ಬರು ನಾಲ್ಕು ಲೋಡ್ ಜಲ್ಲಿಯನ್ನು ಉಚಿತವಾಗಿ ನೀಡಿದ್ದು. ಉಳಿದ ಖರ್ಚನ್ನು ಗ್ರಾಮಸ್ಮರೇ ಭರಿಸಿ ರಸ್ತೆಯನ್ನು ನಿರ್ಮಿಸಿದ್ದಾರೆ. ‘ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಮನವಿಗೆ ಸ್ಪಂದಿಸದಿರುವುದು ಬೇಸರ ತರಿಸಿದೆ. ಹೀಗಾಗಿ, ನಾವೆಲ್ಲರೂ ಸೇರಿಕೊಂಡು ರಸ್ತೆ ನಿರ್ಮಿಸಲು ನಿರ್ಧರಿಸಿದೆವು. ಮಣ್ಣಿನ ರಸ್ತೆ ಈಗ ಜಲ್ಲಿ ರಸ್ತೆಯಾಗಿದೆ. ಈಗಲಾದರೂ ಜನಪ್ರತಿನಿಧಿಗಳು ಈ ರಸ್ತೆಗೆ ಡಾಂಬರು ಹಾಕಿಸಿಕೊಡಬೇಕು’ ಎಂದು ಗ್ರಾಮಸ್ಥ ಆಲ್ವಿನ್ ಡಿಕುನ್ನ ಆಗ್ರಹಿಸಿದರು.
