ಉದಯವಾಹಿನಿ,ಬೆಂಗಳೂರು: ಕಾರಿನಲ್ಲಿ ಸ್ನೇಹಿತನ ಜೊತೆ ಹೋಗುತ್ತಿದ್ದ ಹಳೆ ಆರೋಪಿಯನ್ನು ಅಡ್ಡಗಟ್ಟಿರುವ ರೌಡಿಯನ್ನು ಮಚ್ಚು, ಲಾಂಗ್ ಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಸ್ನೇಹಿತನ ಮೇಲೂ ಹಲ್ಲೆ ನಡೆಸಿರುವ ಭಯಾನಕ ಘಟನೆ ಅಶೋಕನಗರದ ಗರುಡಾ ಮಾಲ್ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಆನೆಪಾಳ್ಯದ ರೌಡಿ ಹೈದರ್ ಅಲಿ (೩೮) ಕೊಲೆಯಾದವರು,ಹಲ್ಲೆಯಿಂದ ಗಾಯಗೊಂಡಿರುವ ಆತನ ಸ್ನೇಹಿತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆಶೋಕನಗರದ ಬಾರ್ ಆಂಡ್ ರೆಸ್ಟೋರೆಂಟ್‌ನಿಂದ ಸ್ನೇಹಿತನ ಜೊತೆ ರಾತ್ರಿ ೧ರ ವೇಳೆ ಹೊರಬಂದ ಹೈದರ್ ಅಲಿ, ಆನೆಪಾಳ್ಯದಲ್ಲಿರುವ ತನ್ನ ಮನೆಯತ್ತ ಕಾರಿನಲ್ಲಿ ಹೊರಟಿದ್ದು,ಮಾರ್ಗ ಮಧ್ಯದ ಗರುಡಾ ಮಾಲ್ ಬಳಿ ಕಾದು ಕುಳಿತಿದದ್ದ ಮೂರ್ನಾಲ್ಕು ಮಂದಿ ಕಾರು ಅಡ್ಡಗಟ್ಟಿದ್ದಾರೆ.
ಕಾರಿನಿಂದ ಇಳಿದ ಹೈದರ್ ಅಲಿ ಮೇಲೆ ಏಕಾಎಕಿ ಮಚ್ಚು ಲಾಂಗ್ ನಿಂದ ಬರ್ಬರ ಹಲ್ಲೆ ನಡೆಸಿ ಅಡ್ಡಬಂದ ಸ್ನೇಹಿತನ ಮೇಲೂ ಹಲ್ಲೆ ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಅಶೋಕ ನಗರ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ರಕ್ತದ ಮಡುವಲ್ಲಿ ಬಿದ್ದ ಹೈದರ್ ಅಲಿಯನ್ನು ಕೂಡಲೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯೆ ಹೈದರ್ ಅಲಿ ಮೃತಪಟ್ಟಿದ್ದನು. ವಿಚಾರ ತಿಳಿದು ಹೈದರ್ ಅಲಿಯ ಬೆಂಬಲಿಗರು ಬೌರಿಂಗ್ ಆಸ್ಪತ್ರೆ ಬಳಿ ಜಮಾಯಿಸಿ ಲಾಂಗು, ಮಚ್ಚು ಹಿಡಿದು ಝಳಪಿಸಿದರು. ಬೌರಿಂಗ್ ಆಸ್ಪತ್ರೆ ಗೇಟ್ ತಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಅಶೋಕನಗರ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.
ಘಟನೆ ಸಂಬಂಧ ಅಶೋಕನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಅಶೋಕನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆನೆಪಾಳ್ಯ ನಿವಾಸಿಯಾಗಿರುವ ಹೈದರ್ ಅಲಿ ಕಾಂಗ್ರೆಸ್? ಶಾಸಕ ಎನ್.ಎ.ಹ್ಯಾರಿಸ್ ಜೊತೆ ಗುರುತಿಸಿಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿ ಎನ್?.ಎ ಹ್ಯಾರಿಸ್ ಪರ ಪ್ರಚಾರ ಮಾಡಿದ್ದರು ಎಂದು ತಿಳಿದುಬಂದಿದೆ.
