ಉದಯವಾಹಿನಿ, ಚಿಕಾಗೋ: ಅಮೆರಿಕದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ಮಹಾ ವಿಮಾನ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಪ್ರಯಾಣಿಕ ವಿಮಾನದ ಪೈಲಟ್ ಸಮಯ ಪ್ರಜ್ಞೆಗೆ ಎಲ್ಲರೂ ಸೆಲ್ಯೂಟ್ ಹೇಳುತ್ತಿದ್ದಾರೆ. ಚಿಕಾಗೋದ ಮಿಟ್ಟೇ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ಸೌಕ್ವೆಸ್ಟ್ ಏರ್ಲೈನ್ಸ್ ವಿಮಾನದ ಎದುರು ಮತ್ತೊಂದು ವಿಮಾನ ಏಕಾಏಕಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತ್ತು. ಕೂಡಲೇ ಸಂಭಾವ್ಯ ಅಪಾಯ ಮನಗಂಡ ಪೈಲಟ್ ವಿಮಾನವನ್ನು ಮತ್ತೆ ಟೇಕ್ ಆಫ್ ಮಾಡಿದ್ದು, ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತ ತಪ್ಪಿದಂತಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿರುವಂತೆ ಸೌತ್‌ವೆಸ್ಟ್ ವಿಮಾನವು ಇಳಿಯಲು ಪ್ರಯತ್ನಿಸುತ್ತಿರುವಾಗ ಅದೇ ರನ್ ವೇ ಮತ್ತೊಂದು ಭಾಗದಲ್ಲಿ ಮತ್ತೊಂದು ಪುಟ್ಟ ಚಾರ್ಟೆಡ್ ವಿಮಾನ ಅಡ್ಡ ಬಂದಿದೆ. ಕೂಡಲೇ ಪ್ರಯಾಣಿಕ ವಿಮಾನದ ಪೈಲಟ್ ವಿಮಾನವನ್ನು ನೋಡಿ ವಿಮಾನವನ್ನು ಸಂಪೂರ್ಣವಾಗಿ ಕೆಳಗಿಳಿಸದೇ ಮತ್ತೆ ಆಕಾಶಕ್ಕೆ ಹಾರಿಸಿದ್ದಾನೆ. ಆ ಮೂಲಕ ಆಗಬಹುದಾದ ದೊಡ್ಡ ಅಪಘಾತವನ್ನು ತಪ್ಪಿಸಿದ್ದಾರೆ.
