ಉದಯವಾಹಿನಿ,ಬೆಂಗಳೂರು: ಪ್ರಯಾಣಿಕರ ಸುರಕ್ಷತೆಯಲ್ಲದೇ, ಪ್ರಯಾಣಿಕರು ಜೊತೆಗೆ ಕೊಂಡೊಯ್ಯುವಂತಹ ನಗದುಗಳ ಬಗ್ಗೆಯೂ ಕೆ ಎಸ್ ಆರ್ ಟಿ ಸಿ ಚಾಲನಾ ಸಿಬ್ಬಂದಿಗಳು ಜಾಗ್ರತೆ ವಹಿಸಿರುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅಲ್ಲದೇ ಕೆ ಎಸ್ ಆರ್ ಟಿ ಸಿಯ ಚಾಲನಾ ಸಿಬ್ಬಂದಿಯ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಹೌದು. ಕೆ ಎಸ್ ಆರ್ ಟಿ ಸಿ ಚಾಲನಾ ಸಿಬ್ಬಂದಿಯ ಸಮಯೋಚಿತ ಸಾಹಸ ಕಾರ್ಯ ಮತ್ತು ಧೈರ್ಯದಿಂದ ಸಹ ಪ್ರಯಾಣಿಕನಿಂದ ರೂ.5 ಲಕ್ಷ ಹಣ ಕದ್ದು ಓಡುತ್ತಿದ್ದ ಮತ್ತೊಬ್ಬ ಪ್ರಯಾಣಿಕನ ಸೆರೆ ಮತ್ತು ಹಣ ವಾಪಸ್ಸು ನೀಡಿದ್ದಾರೆ. ದಿನಾಂಕ 14.06.2023 ರಂದು ಬೆಂಗಳೂರು ಕೇಂದ್ರಿಯ ವಿಭಾಗದ ಘಟಕ-04 ರ ವಾಹನ ಸಂಖ್ಯೆ:ಕೆಎ-57 ಎಫ್ 3975, ಬೆಂಗಳೂರು- ತಿರುನಲ್ಲಾರ್ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿದ್ದಾಗ, ಆಸನ ಸಂಖ್ಯೆ 17 -18 ರಲ್ಲಿ ಪ್ರಯಾಣಿಕರ ಸೋಗಿನಲ್ಲಿ ಕುಳಿತಿದ್ದ ವ್ಯಕ್ತಿ ಆಸನ ಸಂಖ್ಯೆ 29-30 ರಲ್ಲಿ ಕುಳಿತಿದ್ದ.
ಪ್ರಯಾಣಿಕ ದಂಪತಿಯು ಊಟಕ್ಕಾಗಿ ಕೆಳಗಿಳಿದಿದ್ದಾಗ ರೂ.5 ಲಕ್ಷ ಮೊತ್ತವನ್ನು ಕದ್ದು, ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ಬಳಿ ಇಳಿದು ಓಡಿಹೋಗುತ್ತಿದ್ದಾಗ, ಇದನ್ನು ಗಮನಿಸಿದ ನಿಗಮದ ವಾಹನ ಚಾಲಕರಾದ ಮಂಜುನಾಥ್, ಬಿಲ್ಲೆ ಸಂಖ್ಯೆ:566 ಹಾಗೂ ಚಾಲಕ ನಿರ್ವಾಹಕರಾದ ಸೋಮಪ್ಪ ಟಿ. ಎನ್, ಬಿಲ್ಲೆ ಸಂಖ್ಯೆ:6541 ರವರು ಸದರಿ ಪ್ರಯಾಣಿಕನನ್ನು ಬೆನ್ನಟ್ಟಿ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿ, ಶೌರ್ಯ ಮೆರೆದಿರುತ್ತಾರೆ. ಈ ಕುರಿತು ಹಣ ಕಳೆದುಕೊಂಡಿದ್ದ ಆಸನ ಸಂಖ್ಯೆ 29-30 ರ ಪ್ರಯಾಣಿಕರಾದ ಶ್ರೀ ತಿರುಮುರುಗನ್ ತಮ್ಮ ಹಣ ತಮಗೆ ಸಿಕ್ಕ ಕುರಿತು ಅತೀವ ಸಂತಸ ವ್ಯಕ್ತಪಡಿಸಿ, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿ ಇ-ಮೇಲ್ ಕಳುಹಿಸಿರುತ್ತಾರೆ. ಈ ಘಟನೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕರವರಾದ ವಿ. ಅನ್ಬುಕುಮಾರ್, ಭಾ.ಆ.ಸೇ ರವರು ಸದರಿ ಸಿಬ್ಬಂದಿಗಳ ಸಮಯ ಪ್ರಜ್ಞೆ, ಧೈರ್ಯ, ಸಾಹಸ ಮತ್ತು ಪ್ರಯಾಣಿಕರ ಬಗೆಗಿನ ಕಾಳಜಿಯು ಪ್ರಶ್ನಾತೀತ. ಇಂತಹ ಸಿಬ್ಬಂದಿಗಳೇ ನಮ್ಮ ಸಂಸ್ಥೆಯ ಹೆಮ್ಮೆ ಮತ್ತು ಗೌರವ. ಇವರ ಈ ಕಾರ್ಯವು ಇತರರಿಗೆ ಮಾದರಿಯಾಗಲಿ ಎಂದು ಆಶಿಸಿ, ಇವರ ಸಮಯೋಚಿತ ಸೇವಾ ಕಾರ್ಯಕ್ಕೆ ಹರ್ಷವನ್ನು ವ್ಯಕ್ತಪಡಿಸಿ ಅಭಿನಂದಿಸಿರುತ್ತಾರೆ.
