ಉದಯವಾಹಿನಿ,ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುವ ವಿಚಾರವಾಗಿ ನಮ್ಮೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರ ಆಡಳಿತಾತ್ಮಕ ಸಭೆ ಕರೆಯಬೇಕು’ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು. ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಚಮಸಾಲಿ ಮೀಸಲಾತಿ ಚಳವಳಿ ಒಂದು ಹಂತಕ್ಕೆ ತಲುಪಿದ್ದ ವೇಳೆಯೇ ವಿಧಾನಸಭೆ ಚುನಾವಣೆ ಎದುರಾಯಿತು. ಈಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಇಂದು ಕಾನೂನು ಘಟಕದೊಂದಿಗೆ ಸಭೆ ನಡೆಸಿ, ಮುಂದಿನ ಹೋರಾಟದ ಕುರಿತು ಚರ್ಚಿಸಿದ್ದೇವೆ. ಸಿ.ಎಂ ಭೇಟಿಯಾಗಿ ಹಕ್ಕೊತ್ತಾಯ ಮಂಡಿಸುವ ಕುರಿತು ನಿರ್ಣಯಿಸಿದ್ದೇವೆ. ಹಾಗಾಗಿ ಪಂಚಮಸಾಲಿ ಸಮುದಾಯದ ಶಾಸಕರು, ಹೋರಾಟಗಾರರನ್ನು ಒಳಗೊಂಡ ನಿಯೋಗದ ಭೇಟಿಗೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
