ಉದಯವಾಹಿನಿ,ಚಿಕ್ಕಮಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ “ಸುಳ್ಳುರಾಮಯ್ಯ” ಅಲ್ಲ ಅನ್ನೋದಾದರೆ ಕಮಿಟ್ಮೆಂಟ್ ಲೆಟರ್ ತೋರಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ. ಅಕ್ಕಿ ರಾಜಕೀಯದಲ್ಲಿ ಕೇಂದ್ರದ ಮೇಲೆ ಕಾಂಗ್ರೆಸ್ ಆರೋಪ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಸಿ.ಟಿ.ರವಿ, ಅಕ್ಕಿ ಕಳಿಸುತ್ತೇವೆ, ನಿಮ್ಮ ಹೆಸರು ಹಾಕಿಕೊಂಡು ಕೊಡಿ ಅಂತ ಲೆಟರ್ ಕಳಿಸಿಲ್ಲ. ಎಲ್ಲಿದೆ ಕಮಿಟ್ಮೆಂಟ್ ಲೆಟರ್? ತೋರಿಸಲಿ. FCI ಅವರು ನಿಮಗೆ ಅಗತ್ಯವಿರುವ ಅಕ್ಕಿ ಕಳಿಸುತ್ತೇವೆ ಎಂದು ಹೇಳಿದ್ದಾರಾ, ಲೆಟರ್ ತೋರಿಸಿ. ತನ್ನ ಕೈಯಲ್ಲಿ ಆಗದಿರುವುದಕ್ಕೆ ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಈಗಲೇ ಶುರು ಮಾಡಿದ್ದಾರೆ. ಆರೋಪ ಮಾಡುವುದು ನಾಲ್ಕೈದು ತಿಂಗಳ ಬಳಿಕ ಎಂದು ಭಾವಿಸಿದ್ದೆ, ಈಗಲೇ ಶುರು ಮಾಡಿದ್ದಾರೆ. ಕೊಟ್ಟರೆ ನಾನು ಕೊಟ್ಟೆ ಅನ್ನೋದು, ಕೊಡದಿದ್ದರೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಎಂದು ಕಿಡಿ ಕಾರಿದರು. ಜುಲೈ 1ರಿಂದ ಅಕ್ಕಿ ಉಚಿತ ಎಂದು ಭಾಷಣ ಮಾಡಿದ್ದರು, ಈಗ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ನೀವು ಎಲ್ಲಾ BPL ಕಾರ್ಡು ದಾರರ ಖಾತೆಗೆ ಹಣ ಹಾಕಿ, ಅವರೇ ಅಕ್ಕಿ ಕೊಂಡುಕೊಳ್ಳುತ್ತಾರೆ. ಆಕಾಶವೇನು ಕಳಚಿ ಬಿದ್ದಿಲ್ಲ, ಹಣ ಕೊಟ್ಟರೆ ಅಕ್ಕಿ ಸಿಗುತ್ತೆ, ಮೊದಲು ಹಣ ಹಾಕಿ ಎಂದು ಸವಾಲು ಹಾಕಿದರು.
