ಉದಯವಾಹಿನಿ,ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ Fame – II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ ಕಾರಣ, ಟಿವಿಎಸ್ (TVS) ತನ್ನ ಜನಪ್ರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ಏರಿಕೆ ಮಾಡಿತ್ತು. ಇದೀಗ ನೂತನ ದರ ಎಷ್ಟಾಗಿದೆ ಎಂಬುದರ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ. ಟಿವಿಎಸ್ ಮೋಟಾರ್ ಕಂಪನಿ, ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ರೂಪಾಂತರಗಳ ಬೆಲೆಯನ್ನು ರೂ.17,000 ದಿಂದ ರೂ.22,000 ಹೆಚ್ಚಳ ಮಾಡಿತ್ತು. ನೂತನ ದರಗಳು ಜೂನ್ 1ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಿತ್ತು. ಸದ್ಯ, ದೆಹಲಿಯ ಆನ್ ರೋಡ್ ಬೆಲೆ ಕುರಿತು ವಿವರ ಲಭಿಸಿದೆ. ಮೇ.20 (2023)ರ ಮೊದಲು ಐಕ್ಯೂಬ್ ಸ್ಕೂಟರ್ ಬುಕ್ಕಿಂಗ್ ಮಾಡಿದ್ದರೆ, ವೇರಿಯೆಂಟ್ ಅನುಗುಣವಾಗಿ ರೂ.1,16,184 ರಿಂದ ರೂ.1,28,849 ದರದಲ್ಲಿ ಕೊಂಡುಕೊಳ್ಳಬಹುದು. ಮೇ.21ರ ನಂತರ ಆರ್ಡರ್ ಮಾಡಿದ ಖರೀದಿದಾರರಿಗೆ ಐಕ್ಯೂಬ್ ರೂಪಾಂತರ ರೂ.1,23,184 ಹಾಗೂ ಐಕ್ಯೂಬ್ ಎಸ್ ರೂಪಾಂತರ ರೂ.1,38,289 ಬೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಿಗುತ್ತದೆ.
ರಾಜ್ಯಗಳ ಸಬ್ಸಿಡಿ ಅನುಗುಣವಾಗಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ದರದಲ್ಲೂ ವ್ಯತ್ಯಾಸವಾಗುತ್ತದೆ. ಹೆಚ್ಚಿನ ಮಾಹಿತಿ ಪಡೆಯಲು ಸಮೀಪದ ಡೀಲರ್ ಶಿಪ್ ಗೆ ಭೇಟಿ ನೀಡುವುದು ಉತ್ತಮ. ಟಿವಿಎಸ್ ಕಂಪನಿ, ಇತ್ತೀಚೆಗೆ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಐತಿಹಾಸಿಕ ಸಾಧನೆ ಮಾಡಿತ್ತು. ಬಿಡುಗಡೆಯಾದಾಗಿನಿಂದ ಈವರೆಗೆ 1,00,000 ಲಕ್ಷ ಯುನಿಟ್ ಸೇಲ್ ಮಾಡಿ, ದಾಖಲೆ ನಿರ್ಮಿಸಿತ್ತು. ಕಳೆದ ಮೇ ತಿಂಗಳಲ್ಲಿಯು 20,000 ಯುನಿಟ್ ಐಕ್ಯೂಬ್ ಸ್ಕೂಟರ್ ಮಾರಿತ್ತು. ಇದು ಪ್ರತಿಸ್ಪರ್ಧಿ ಕಂಪನಿಗಳಿಗೆ ನಡುಕ ಹುಟ್ಟಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಟಿವಿಎಸ್ ಐಕ್ಯೂಬ್ ಮತ್ತು ಐಕ್ಯೂಬ್ ಎಸ್ ಸ್ಕೂಟರ್ ಕುರಿತಂತೆ ಒಂದಷ್ಟು ವಿಚಾರವನ್ನು ತಿಳಿದುಕೊಳ್ಳುವುದಾದರೆ, ಇವೆರೆಡು 3.04 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 100 km ರೇಂಜ್ ನೀಡಲಿವೆ. ಕಳೆದ ಜನವರಿಯಲ್ಲಿ ನಡೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಐಕ್ಯೂಬ್ ST, 145 km ರೇಂಜ್ ಕೊಡಲಿದೆ. ಆದರೆ, ಇದು ಬಿಡುಗಡೆಯಾಗಿಲ್ಲ.
