ಉದಯವಾಹಿನಿ,ಬೆಂಗಳೂರು: ಸಂಸತ್‌ನ ಉಭಯ ಸದನಗಳಲ್ಲಿ ವಕ್ಫ್ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿರುವುದನ್ನು ಸ್ವಾಗತಿಸುವುದಾಗಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು. ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಸದನಗಳಲ್ಲಿ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿದೆ. ರಾಷ್ಟ್ರದಲ್ಲಿ ವಕ್ಫ್ ಕಾನೂನುಗಳ ಬದಲಾವಣೆ ಅಗತ್ಯವಿತ್ತು. ಇಂದು ಕಾಯ್ದೆಗೆ ಬದಲಾವಣೆ ಮಾಡಿ ಉಮೀದ್ ಹೆಸರಲ್ಲಿ ಜಾರಿಗೆ ಮುಂದಾಗಿದ್ದಾರೆ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ರಾಜ್ಯದಲ್ಲಿ ವಕ್ಫ್ ಹೋರಾಟ ಮಾಡಲಾಗಿತ್ತು. ಜಗದಾಂಬಿಕಾ ಪಾಲ್ ಸಹ ಬಂದಿದ್ದರು. ಐತಿಹಾಸಿಕ ಹೋರಾಟ ನಡೆಸಲಾಯಿತು. ಅನೇಕರು, ಅನೇಕ ಸಂಘಟನೆಗಳು ನಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದರು ಎಂದು ಹೇಳಿದರು.ಹನಿಟ್ರ್ಯಾಪ್ ಪ್ರಕರಣದಲ್ಲಿ ಸಚಿವ ಕೆ.ಎನ್.ರಾಜಣ್ಣ ಅವರೇ ಸದನದಲ್ಲಿ ಮಾತಾಡಿದ್ದರು. ತಮಗೆ ಟ್ರ್ಯಾಪ್ ಮಾಡಲು ಯತ್ನ ನಡೆದಿದ್ದು, ಇದರ ಹಿಂದೆ ಮಹಾನಾಯಕ ಇದ್ದಾರೆ ಅಂದಿದ್ದರು. ಆದರೆ ಸಿಎಂ, ಗೃಹ ಸಚಿವರು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸರ್ಕಾರ ಇನ್ನೂ ಕಾಲಹರಣ ಮಾಡುತ್ತಿದೆ. ಹನಿಟ್ರ್ಯಾಪ್‌ಗೆ ಕೊಲೆಯತ್ನದ ರೂಪ ಸಿಕ್ಕಿದೆ ಎಂದರು. ಮುಂದಿನ ಚುನಾವಣೆಗೆ ಪಕ್ಷ ಸಂಘಟನೆ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಒಳಗೊಂಡು ಬಿಜೆಪಿಯನ್ನು ಪೂರಕವಾಗಿ ಮಾಡಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಅಣಿಗೊಳಿಸಬೇಕು ಎಂದರು.ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ನಾಯಕರ ಜತೆ ಮಾತನಾಡುತ್ತೇವೆ. ಯತ್ನಾಳ್ ಅವರ ಉತ್ತರಕರ್ನಾಟಕದ ಭಾಷೆಯಿಂದ ತಪ್ಪು ಕಲ್ಪನೆ ಉಂಟಾಗಿದೆ. ಯತ್ನಾಳ್ ಅವರು ಮರಳಿ ಪಕ್ಷಕ್ಕೆ ಬರಬೇಕು. ಮುಂದಿನ ಚುನಾವಣೆಗೆ ಭದ್ರ ಬುನಾದಿ ಹಾಕಿ ಪಕ್ಷ ಅಣಿಗೊಳಿಸುತ್ತೇವೆ ಎಂದು ಹೇಳಿದರು.
ವಕ್ಸ್ ಮಾದರಿಯಲ್ಲಿ ಹೋರಾಟಗಳು ಪಕ್ಷದಲ್ಲಿ ನಡೆಯಬೇಕು. ಮುಡಾ, ವಾಲ್ಮೀಕಿ, ಹನಿಟ್ರ್ಯಾಪ್ ಹೋರಾಟಗಳು ತಾರ್ಕಿಕ ಅಂತ್ಯಕ್ಕೆ ಹೋಗಲಿಲ್ಲ. ಯಡಿಯೂರಪ್ಪ ಪಕ್ಷ ಕಟ್ಟಿದವರು. ಇಂದು ಅವರು ತಮ್ಮ ಮಗನನ್ನು ಉಳಿಸಲು ಧರಣಿಯಲ್ಲಿ ಬಂದು ಕೂರುವ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಜಯೇಂದ್ರ ಅವರ ಫ್ರೀಡಂಪಾರ್ಕ್ ಹೋರಾಟ ಮತ್ತೊಂದು ಗುಂಪುಗಾರಿಕೆ ಅಲ್ಲದೇ ಮತ್ತೇನಲ್ಲ. ಈ ಹೋರಾಟಕ್ಕೆ ತುಂಬಾ ಜನ ಶಾಸಕರು ಬಂದಿರಲಿಲ್ಲ. ಪಕ್ಷದಲ್ಲಿ ಅವ್ಯವಸ್ಥೆ ಇದೆ. ಹೈಕಮಾಂಡ್‌ನವರು ಅದನ್ನು ಸರಿಪಡಿಸಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!