ಉದಯವಾಹಿನಿ,ಬೆಂಗಳೂರು : ಕರ್ನಾಟಕ ಭೋವಿ ನಿಗಮ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ) ಇಂದು ರಾಜ್ಯದ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ಬೆಂಗಳೂರು, ಶಿವಮೊಗ್ಗ ಸೇರಿದಂತೆ 10ಕ್ಕೂ ಹೆಚ್ಚು ಕಡೆ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ, ನಿರ್ದೇಶಕರ ಕಚೇರಿ, ನಿವಾಸ ಮತ್ತಿತರ ಕಡೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಸಂಬಂಧ ಈ ಹಿಂದೆ ಹೈಕೋರ್ಟ್ ಎಸ್‌ಐಟಿ ಮೂಲಕ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿತ್ತು. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಸಿಐಡಿ ಮೂಲಕವೂ ತನಿಖೆ ನಡೆಸಿ ಈ ಹಿಂದೆ ನಿಗಮದಲ್ಲಿ ಕೆಲಸ ಮಾಡಿದ್ದ ಕೆಲವು ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು.
ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಾ.ಬಿ.ಕೆ.ನಾಗರಾಜಪ್ಪ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲೀಲಾವತಿಯವರಿಗೆ ಸೇರಿದ ನಿವಾಸ ಮತ್ತು ಕಚೇರಿಗಳಲ್ಲಿ ಇಡಿ ತಂಡ ದಾಳಿ ನಡೆಸಿ ದಾಖಲೆಗಳನ್ನು ಕಲೆ ಹಾಕಿದ್ದು, ಬ್ಯಾಂಕ್ ಖಾತೆಗಳ ವಿವರ, ಚರ-ಚಿರ ಆಸ್ತಿಗಳು, ಸಂಬಂಧಿಕರ ಹೆಸರಿನಲ್ಲಿ ಸಂಪಾದನೆ ಮಾಡಿದ್ದ ಆಸ್ತಿಪಾಸ್ತಿ ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಬೆಂಗಳೂರಿನ ವಿಜಯನಗರದಲ್ಲಿರುವ ನಿವೃತ್ತ ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ.ನಾಗರಾಜಪ್ಪ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೆ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿಯವರ ಜಾಲಹಳ್ಳಿ ನಿವಾಸದ ಮೇಲೂ ಇ.ಡಿ ದಾಳಿ ಮಾಡಿದೆ. ಈ ಹಿಂದೆ ಈ ಇಬ್ಬರು ಸಿಐಡಿ ದಾಳಿ ನಡೆದ ವೇಳೆ ತಲೆಮರೆಸಿಕೊಂಡಿದ್ದರು. ಶಿವಮೊಗ್ಗದಲ್ಲೂ ಇ.ಡಿ. ದಾಳಿ ನಡೆಸಿದೆ. ನಿಗಮದ ಕಚೇರಿಯಲ್ಲಿ 2021ರ ಏ.5ರಿಂದ 2022ರ ಜು.8ರವರೆಗೆ ಭೋವಿ ನಿಗಮದ ಕಚೇರಿಯ ಅಧೀಕ್ಷಕರಾಗಿದ್ದ ಪಿ.ಡಿ.ಸುಬ್ಬಪ್ಪ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.

Leave a Reply

Your email address will not be published. Required fields are marked *

error: Content is protected !!