ಉದಯವಾಹಿನಿ, ಬೆಂಗಳೂರು: ರಾಜ್ಯಸರ್ಕಾರ ತಮ ತೇಜೋವಧೆಗೆ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದು, ಸುಳ್ಳು, ಭೂ ಒತ್ತುವರಿ ಹಗರಣವನ್ನು ಮುಂದಿಟ್ಟು ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರ್ನಾಲ್ಕು ತಿಂಗಳಿನಿಂದಲೂ ತಾವು ಮಾಧ್ಯಮಗಳ ಜೊತೆ ಮಾತನಾಡಿಲ್ಲ. ಇನ್ನೂ ಮೂರು ತಿಂಗಳು ಸುಮನಿರಬೇಕೆಂದುಕೊಂಡಿದ್ದೆ. ಆದರೆ ಇವರ ಆರೋಪಗಳನ್ನು ನೋಡಿ ಮನಸ್ಸು ತಡೆಯುತ್ತಿಲ್ಲ ಎಂದು ಹೇಳಿದರು.
ಅಮೆರಿಕದ ಟ್ರಂಪ್ ಬಗ್ಗೆ ಸಂಸದರೊಬ್ಬರು ನಿರಂತರವಾಗಿ 25 ಗಂಟೆ ಕಾಲ ಮಾತನಾಡಿದ್ದರು ಎಂಬ ದಾಖಲೆ ಇದೆ. ನಾನು ದಿನದ 24 ಗಂಟೆ ಕಾಲ ನಾಳೆ ಬೆಳಿಗ್ಗೆಯವರೆಗೂ ಮಾತನಾಡುವ ಅವಕಾಶ ಇದೆ ಎಂದರು.40 ವರ್ಷಗಳ ಹಿಂದೆ 47 ಎಕರೆ ಭೂಮಿಯನ್ನು ಸಿನಿಮಾ ನಿರ್ಮಾಪಕನಾಗಿದ್ದಾಗ ಖರೀದಿ ಮಾಡಿದ್ದೆ. ಅದರಲ್ಲಿ ಒತ್ತುವರಿಯಾಗಿದ್ದರೆ ದಾಖಲೆಗಳಲ್ಲಿ ಸರಿಪಡಿಸಿಕೊಳ್ಳಿ ಎಂದು ನಾನೇ ಹೇಳಿದ್ದೇನೆ. ಆದರೂ ದುರುದ್ದೇಶಪೂರ್ವಕವಾಗಿ ನನ್ನ ವರ್ಚಸ್ಸಿಗೆ ಧಕ್ಕೆ ಉಂಟುಮಾಡಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಸರ್ವೆ ಮಾಡುವ ಪ್ರಯತ್ನ ಮಾಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ನಾನಾ ರೀತಿಯ ಹಿಂಸೆ ನೀಡಿರುವುದು ಹೊಸತಲ್ಲ ಎಂದರು.
71 ಎಕರೆ ಗೋಮಾಳ ಒತ್ತುವರಿಯಾಗಿದೆ ಎಂದು ಸಾಮಾಜಿಕ ಪರಿವರ್ತನಾ ಸಂಸ್ಥೆ ಆರೋಪ ಮಾಡಿದೆ. ನನ್ನ ಸುಪರ್ದಿಯಲ್ಲಿರುವುದೇ 47 ಎಕರೆ. ಇನ್ನು 71 ಎಕರೆ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು. ರಾಜಕಾರಣದಲ್ಲಿ ನಾನು ಮಾಜಿ ಪ್ರಧಾನಿಯ ಮಗ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವನು. ಕೇವಲ 4 ಎಕರೆ ಒತ್ತುವರಿ ಮಾಡಿಕೊಳ್ಳಬೇಕೆ? ಎಂದು ಕಿಡಿಕಾರಿದರು.
