ಉದಯವಾಹಿನಿ,ತುಮಕೂರು: ತುಂಬಿ ತುಳುಕುತ್ತ ಬರುತ್ತಿದ್ದ ಬಸ್ ಅನ್ನು ತಡೆಯಲು ಮುಂದಾದ ಮಹಿಳೆಯರ ಮೇಲೆಯೇ ಚಾಲಕ ಬಸ್ ಹತ್ತಿಸಲು ಯತ್ನಿಸಿದ್ದು, ಆತನ ವಿರುದ್ಧ ಶುಕ್ರವಾರ ಆಕ್ರೋಶ ವ್ಯಕ್ತವಾಗಿದೆ. ಕೊರಟಗೆರೆ ತಾಲೂಕು ಹಂಚಿಹಳ್ಳಿ ಗ್ರಾಪಂಯ ಜಿ.ನಾಗೇನಹಳ್ಳಿ ಬಳಿಯ ಪಾವಗಡ-ದಾಬಸ್‌ಪೇಟೆಯ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹತ್ತಾರು ಜಿಲ್ಲೆಗಳಿಂದ ಶುಕ್ರವಾರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಜನರು ಆಗಮಿಸಿದ್ದಾರೆ. ಗೊರವನಹಳ್ಳಿ ಪ್ರವಾಸಿ ಕ್ಷೇತ್ರದಿಂದ ಮತ್ತೆ ತೆರಳಲು ಸಮರ್ಪಕ ಸರಕಾರಿ ಬಸ್ ವ್ಯವಸ್ಥೆ ಇರಲಿಲ್ಲ. ಈ ಸಂದರ್ಭದಲ್ಲಿ ಘಟನೆ ನಡೆದಿದೆ.
3 ಗಂಟೆ ಕಾದರೂ ನಿಲ್ಲಿಸದ ಬಸ್: ಗೊರವನಹಳ್ಳಿ ಮಹಾಲಕ್ಷ್ಮೀ ದೇವಿಯ ದರ್ಶನ ಮುಗಿಸಿಕೊಂಡು ಜಿ.ನಾಗೇನಹಳ್ಳಿಗೆ ಆಟೊ ಮೂಲಕ ಮಹಿಳೆಯರು ಆಗಮಿಸಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ 3 ಗಂಟೆ ಕಾದರೂ ಚಾಲಕ ಸರಕಾರಿ ಬಸ್ ನಿಲ್ಲಿಸದೇ ಹಾಗೇ ಹೊರಟು ಹೋಗಿದ್ದಾರೆ. ರೊಚ್ಚಿಗೆದ್ದ ಮಹಿಳೆಯರು ಬಸ್ಸಿಗೆ ಅಡ್ಡ ನಿಂತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಚಾಲಕ ಬಸ್ ನಿಲ್ಲಿಸದೇ ಮಹಿಳೆಯರ ಮೇಲೆ ಹತ್ತಿಸಲು ಯತ್ನಿಸಿದ್ದಾನೆ.
