ಉದಯವಾಹಿನಿ, ವಾಷಿಂಗ್ಟನ್ ಡಿಸಿ (ಅಮೆರಿಕ): ಇರಾನ್ ಮೇಲಿನ ದಾಳಿಗಳನ್ನು ಮತ್ತೆ ಮತ್ತೆ ಸಮರ್ಥಿಸಿಕೊಳ್ಳುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಆ ದೇಶವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಬಿಡಬಾರದು. ಹಾಗೊಂದು ವೇಳೆ ಅದು ಅಣುಬಾಂಬ್​ಗಳನ್ನು ಪಡೆದರೆ, ತಕ್ಷಣವೇ ಬಳಸುತ್ತದೆ” ಎಂದು ಆರೋಪಿಸಿದ್ದಾರೆ. “ಜಾಗತಿಕ ಭದ್ರತೆಗಾಗಿ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ತಡೆಯುವುದು ಅತ್ಯಗತ್ಯ. ಆ ದೇಶದ ಹಿಡಿತದಲ್ಲಿ ಮಾರಕ ಬಾಂಬ್​ಗಳು ಸಿಕ್ಕರೆ, ಅವುಗಳನ್ನು ಒಂದು ಗಂಟೆ, ದಿನದೊಳಗೆ ಬಳಸಲೂ ಹೇಸುವುದಿಲ್ಲ. ಇಡೀ ಮಧ್ಯಪ್ರಾಚ್ಯವನ್ನೇ ನಾಶ ಮಾಡುತ್ತದೆ” ಎಂದು ವಾದಿಸಿದರು.
“ಇರಾನ್​ ನಾಯಕರು ಕ್ರೂರಿಗಳು. ಕಳೆದ ವರ್ಷಾಂತ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ತಮ್ಮದೇ ಸಾವಿರಾರು ಜನರನ್ನು ಕೊಂದಿದ್ದಾರೆ. ನಾನು ಬಹುತೇಕ ಎಲ್ಲರಿಗಿಂತ ಕಡಿಮೆ ಯುದ್ಧಗಳನ್ನು ಬಯಸುತ್ತೇನೆ” ಎಂದು ಟ್ರಂಪ್ ಹೇಳಿದರು.ಇರಾನ್​ ಸೇನೆಯೇ ನಾಶ: “ಕಳೆದ ಎರಡು ವಾರಗಳಿಂದ ಅಮೆರಿಕ ನಡೆಸಿದ ದಾಳಿಗಳಲ್ಲಿ ಇರಾನ್‌ನ ಸೇನೆಯೇ ನಾಶವಾಗಿದೆ. ನಾವು ಅವರ ಮಿಲಿಟರಿಯನ್ನು ನಿರ್ನಾಮ ಮಾಡಿದ್ದೇವೆ. ಅವರ ಬಳಿ ನೌಕಾಪಡೆ, ವಾಯುಪಡೆ, ವಿಮಾನ ವಿರೋಧಿ ಶಸ್ತ್ರಾಸ್ತ್ರಗಳಿಲ್ಲ. ಎಲ್ಲದ್ದಕ್ಕಿಂತ ಹೆಚ್ಚಾಗಿ ನಾಯಕತ್ವವೇ ಇಲ್ಲ. ಹೊಸ ನಾಯಕನನ್ನೂ ನಾವು ಬಿಟ್ಟಿಲ್ಲ” ಎಂದು ಟ್ರಂಪ್ ಗುಡುಗಿದ್ದಾರೆ.

“ಅಮೆರಿಕದ ಸೇನಾ ಕಾರ್ಯಾಚರಣೆಗಳು ಕೇವಲ ತಮ್ಮ ದೇಶಕ್ಕೆ ಮಾತ್ರವಲ್ಲದೇ, ಜಾಗತಿಕ ಭದ್ರತೆ ಹಿತಾಸಕ್ತಿ ಹೊಂದಿದೆ. ನಾವು ಇಡೀ ಜಗತ್ತಿನ ಒಳಿತಿಗಾಗಿ ಹೋರಾಡುತ್ತಿದ್ದೇವೆ. ಸೈದ್ಧಾಂತಿಕ ಅನಾರೋಗ್ಯದಿಂದ ಬಳಲುತ್ತಿರುವ, ಅತ್ಯಂತ ಕೆಟ್ಟ ದೇಶ (ಇರಾನ್​)ದೊಂದಿಗೆ ನಾವು ಸಂಘರ್ಷ ನಡೆಸುತ್ತಿದ್ದೇವೆ” ಎಂದು ಟ್ರಂಪ್​ ತಿಳಿಸಿದ್ದಾರೆ.

“ಇರಾನ್‌ಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಅವಕಾಶ ನೀಡುವುದರಿಂದ ದುರಂತವನ್ನು ಮೈಮೇಲೆ ಎಳೆದುಕೊಂಡಂತೆ ಎಂದು ಟ್ರಂಪ್ ಪುನರುಚ್ಚರಿಸಿ, ಇರಾನ್‌ಗೆ ಮಾರಕಾಸ್ತ್ರಗಳ ಮೂಲಕ ವಿಶ್ವದ ಗಣನೀಯ ಭಾಗವನ್ನು ಸ್ಫೋಟಿಸುತ್ತದೆ. ಅವುಗಳನ್ನು ಕೆಲವೇ ಗಂಟೆಗಳಲ್ಲಿ ಅದು ಬಳಸುತ್ತದೆ” ಎಂದರು. ಇರಾನ್​​ನ ಪ್ರತಿ ದಾಳಿ ಸಾಮರ್ಥ್ಯವೇ ನಾಶ: “ಅಮೆರಿಕದ ಪಡೆಗಳು ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯಗಳನ್ನು ನಾಶಪಡಿಸಿದೆ. ಆ ದೇಶದ ನಾಯಕತ್ವದ ಎರಡು ಹಂತಗಳು ಅಥವಾ ಬಹುಶಃ ಮೂರನೇ ಭಾಗವನ್ನೂ ಸಂಪೂರ್ಣವಾಗಿ ಹೊಸಕಿ ಹಾಕಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.

ಜಾಗತಿಕ ಇಂಧನ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಟ್ರಂಪ್ ಉಲ್ಲೇಖಿಸಿ, “ಕೆಲವು ದೇಶಗಳು ಇಂಧನ ಪೂರೈಕೆಗಾಗಿ ಜಲಮಾರ್ಗದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಇರಾನ್ ಹಲವು ವರ್ಷಗಳಿಂದ ಹಾರ್ಮುಜ್ ಅನ್ನು ಬಳಸಿಕೊಂಡಿದೆ. ಕೆಲವು ದೇಶಗಳು ತಮ್ಮ ಇಂಧನದ ಶೇಕಡಾ 90ರಷ್ಟು ಈ ಹಾರ್ಮುಜ್ ಜಲಸಂಧಿಯಿಂದ ಪಡೆಯುತ್ತವೆ. ಇದು ಮುಚ್ಚುವ ಮೂಲಕ ಜಾಗತಿಕ ಅಡಚಣೆ ಉಂಟಾಗಬಾರದು” ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!