ಉದಯವಾಹಿನಿ, ವಿಶ್ವಸಂಸ್ಥೆ: ರಾಜಕೀಯ ಉದ್ದೇಶಗಳಿಗೆ ಧಾರ್ಮಿಕ ಗುರುತನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಪ್ರವೃತ್ತಿಯನ್ನು ಪಾಕಿಸ್ತಾನ ಹೆಚ್ಚುಸುತ್ತಿದೆ ಎಂದು ಜಾಗತಿಕ ವೇದಿಕೆ ವಿಶ್ವಸಂಸ್ಥೆಯಲ್ಲಿ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಇಸ್ಲಾಮೋಫೋಬಿಯಾವನ್ನು ಎದುರಿಸಲು ಅಂತಾರಾಷ್ಟ್ರೀಯ ದಿನವನ್ನು ಗುರುತಿಸಿ ಸೋಮವಾರ ನ್ಯೂಯಾರ್ಕ್‌ನಲ್ಲಿ ಇಸ್ಲಾಮಿಕ್ ಸಹಕಾರ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ನಾಗರಿಕತೆಗಳ ಒಕ್ಕೂಟ ಜಂಟಿಯಾಗಿ ಆಯೋಜಿಸಿದ್ದ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ, ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ ಮಾತನಾಡಿದರು. ಈ ವೇಳೆ, ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಪ್ರಾದೇಶಿಕ ಭದ್ರತಾ ವಿಷಯಗಳ ಕುರಿತು ಪಾಕಿಸ್ತಾನವನ್ನು ಪರೋಕ್ಷವಾಗಿ ಅವರು ಟೀಕಿಸಿದ್ದಾರೆ. ಯಾವುದೇ ನಂಬಿಕೆಯನ್ನು ಗುರಿಯಾಗಿಸಿಕೊಂಡರೂ ಧರ್ಮದ ಹೆಸರಿನಲ್ಲಿ ಹಿಂಸೆ ಮತ್ತು ದ್ವೇಷವನ್ನು ಖಂಡಿಸಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದ್ದಾರೆ.
ಪವಿತ್ರ ರಂಜಾನ್ ಮಾಸದ ಶುಭಾಶಯಗಳನ್ನು ತಿಳಿಸಿದ ಅವರು, ಧಾರ್ಮಿಕ ತಾರತಮ್ಯ ಎದುರಿಸುವ ಪ್ರಯತ್ನವನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಭಾರತವು ಪ್ರಪಂಚದ ಬಹುತೇಕ ಎಲ್ಲ ಪ್ರಮುಖ ಧರ್ಮಗಳ ಅನುಯಾಯಿಗಳಿಗೆ ನೆಲೆಯಾಗಿದೆ. ಹಿಂದೂ ಧರ್ಮ, ಬೌದ್ಧಧರ್ಮ, ಜೈನ ಧರ್ಮ ಮತ್ತು ಸಿಖ್ ಧರ್ಮ ಸೇರಿದಂತೆ ನಾಲ್ಕು ಪ್ರಮುಖ ನಂಬಿಕೆಗಳ ನೆಲೆಯಾಗಿದೆ. ಭಾರತವು ಧಾರ್ಮಿಕ ತಾರತಮ್ಯದಿಂದ ಮುಕ್ತವಾದ ಪ್ರಪಂಚದ ಮಹತ್ವವನ್ನು ಅರ್ಥಮಾಡಿಕೊಂಡಿದೆ ಎಂಬುದನ್ನು ವಿವರಿಸಿದರು. ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವ ಸರ್ವ ಧರ್ಮ ಸಂಭವ ಎಂಬ ತತ್ವವನ್ನು ಉಲ್ಲೇಖಿಸಿದ ಪರ್ವತನೇನಿ, ಇದು ಭಾರತದ ಸಂವಿಧಾನದ ಜಾತ್ಯತೀತ ಸ್ವರೂಪವನ್ನು ರೂಪಿಸಿದೆ ಎಂದರು.
ಧರ್ಮ ರಾಜಕೀಯವಾಗಬಾರದು: ಧರ್ಮವನ್ನು ರಾಜಕೀಯಗೊಳಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇದು ಮತ್ತಷ್ಟು ವಿಭಜನೆಗೆ ಕಾರಣವಾಗಿ, ಧ್ರುವೀಕರಣದ ಸೃಷ್ಟಿಸುವ ಅಪಾಯವಿದೆ. ವಿಶ್ವಸಂಸ್ಥೆಯು ಧರ್ಮ, ಸಂಸ್ಕೃತಿ ಮತ್ತು ರಾಜಕೀಯವನ್ನು ಮೀರಿದ ಸಂಸ್ಥೆಯಾಗಿ ಸ್ಥಾಪನೆಯಾಯಿತು ಮತ್ತು ಅದರ ವಿಶ್ವಾಸಾರ್ಹತೆಯು ಸಾರ್ವತ್ರಿಕತೆ ಮತ್ತು ನಿಷ್ಪಕ್ಷಪಾತದ ಮೇಲೆ ನಿಂತಿದೆ. ಮಾನವೀಯತೆಗೆ ವಿಶ್ವಸಂಸ್ಥೆಯ ಅತಿದೊಡ್ಡ ಕೊಡುಗೆಯೆಂದರೆ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವುದು, ಸಂಘರ್ಷಗಳನ್ನು ಪರಿಹರಿಸುವುದು, ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಧರ್ಮವನ್ನು ಪರಿಗಣಿಸದೇ ಮಾನವ ಹಕ್ಕುಗಳನ್ನು ರಕ್ಷಿಸುವುದಾಗಿದೆ ಎಂದು ಪ್ರತಿಪಾದಿಸಿದರು.
ಪಾಕಿಸ್ತಾನದ ವಿರುದ್ಧ ಟೀಕೆ: ಭಾರತದ ಪಶ್ಚಿಮ ನೆರೆಯ ದೇಶ, ಇಸ್ಲಾಮೋಫೋಬಿಯಾದ ಕಾಲ್ಪನಿಕ ಕಥೆಗಳನ್ನು ಹರಡುತ್ತಿದೆ. ಅಹ್ಮದಿಯಾ ಸಮುದಾಯದ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದ್ದು, ಆಫ್ಘನ್ ನಿರಾಶ್ರಿತರ ಗಡೀಪಾರು ಮತ್ತು ಪವಿತ್ರ ರಂಜಾನ್ ತಿಂಗಳಲ್ಲಿ ನಡೆಸಲಾದ ವೈಮಾನಿಕ ದಾಳಿಗಳ ಬಗ್ಗೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.
