ಉದಯವಾಹಿನಿ, ಮಾಸ್ಕೋ, ರಷ್ಯಾ: ಇರಾನ್ ಮೇಲಿನ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿಯನ್ನು ರಷ್ಯಾ ಖಂಡಿಸಿದೆ. ‘ತೀವ್ರ ಹಿಂಸಾಚಾರದಿಂದ ಹಲವು ನಾಗರಿಕರು ಸಾವು ನೋವು ಸಂಭವಿಸಿದೆ. ಜೊತೆಗೆ ಈ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳಿಗೆ ವ್ಯಾಪಕವಾಗಿ ಹಾನಿಯುಂಟಾಗಿದೆ’ ಎಂದು ರಷ್ಯಾ ಪ್ರತಿಕ್ರಿಯೆ ನೀಡಿದೆ. ಸೋಮವಾರ ರಾತ್ರಿ ರಷ್ಯಾ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿ, ಇರಾನ್ ಮೇಲಿನ ಅಮೆರಿಕದ ಅಪ್ರಚೋದಿತ ದಾಳಿಯನ್ನು ಖಂಡಿಸುವ ಜೊತೆಗೆ ತಕ್ಷಣವೇ ಯುದ್ಧ ಕೊನೆಗೊಳಿಸುವಂತೆ ಕರೆ ನೀಡಿದೆ. ತಮ್ಮ ಬಳಿ ಲಭ್ಯ ಇರುವ ಸಾಮರ್ಥ್ಯಗಳ ವ್ಯಾಪ್ತಿಯಲ್ಲಿ ಸಂಘರ್ಷವನ್ನು ಅಂತ್ಯಗೊಳಿಸುವ ಪ್ರಯತ್ನಗಳಿಗೆ ಕೊಡುಗೆ ನೀಡಲು ಸಿದ್ಧವಾಗಿದ್ದೇವೆ ಎಂಬುದನ್ನು ರಷ್ಯಾ ತಿಳಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇರಾನ್ ನಾಯಕತ್ವದ ನಡುವಿನ ಫೋನ್ ಕರೆಗಳು ಸೇರಿದಂತೆ ರಷ್ಯಾದ ಅಧಿಕಾರಿಗಳ ಪ್ರತ್ಯೇಕ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುವ ಮೂಲಕ ಮಧ್ಯಪ್ರಾಚ್ಯ ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸಿದ್ದಾರೆ.

“ಅಮೆರಿಕ-ಇಸ್ರೇಲ್ ಆಕ್ರಮಣ”ದಿಂದ ಬಲಿಯಾದವರ ಸಂಖ್ಯೆ ಈಗ ನೂರು ಮತ್ತು ಸಾವಿರ ತಲುಪಿದೆ. ಜೊತೆಗೆ ನಾಗರಿಕ ಮೂಲಸೌಕರ್ಯಕ್ಕೆ ತೀವ್ರ ಹಾನಿಯಾಗಿದೆ ಎಂದು ರಷ್ಯಾ ಹೇಳಿಕೆಯಲ್ಲಿ ತಿಳಿಸಿದೆ. ಇರಾನಿನ ಪ್ರತೀಕಾರದ ದಾಳಿಯಿಂದಾಗಿ ಜಾಗತಿಕ ಸಮುದ್ರ ವ್ಯಾಪಾರದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಸಮಸ್ಯೆ ಉಂಟಾಗಿದೆ. ಒಂದು ಕಾಲದಲ್ಲಿ ಸ್ಥಿರ ಮತ್ತು ಸಮೃದ್ಧ ಪ್ರದೇಶವೆಂದು ಪರಿಗಣಿಸಲ್ಪಟ್ಟಿದ್ದ ಪರ್ಷಿಯನ್ ಕೊಲ್ಲಿ ಈಗ “ಅವ್ಯವಸ್ಥೆ ಮತ್ತು ಅನಿಶ್ಚಿತತೆಯನ್ನು” ಎದುರಿಸುತ್ತಿದೆ ಎಂದು ಹೇಳಿಕೆಯಲ್ಲಿ ರಷ್ಯಾ ಉಲ್ಲೇಖಿಸಿದೆ.
ದಿನದಿಂದ ದಿನಕ್ಕೆ ಸಂಘರ್ಷವು ತೀವ್ರಗೊಳ್ಳುತ್ತಿರುವುದನ್ನು ಟೀಕಿಸಿರುವ ರಷ್ಯಾ, ಉದ್ವಿಗ್ನತೆ ತಗ್ಗಿಸಲು ರಾಜತಾಂತ್ರಿಕ ಮಾತುಕತೆ ಮಾರ್ಗಗಳನ್ನು ಹುಡುಕುವ ಬದಲು ಉಭಯ ಕಡೆಗಳಿಂದಲೂ ವಿನಾಶಕಾರಿ ಮತ್ತು ಮಾರಕ ಕ್ರಮಗಳು ಉಲ್ಬಣಗೊಳ್ಳುತ್ತಿವೆ ಎಂದು ತಿಳಿಸಿದೆ.

ಹಾಗೆಯೇ, ನಾಗರಿಕ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಕೊಲ್ಲಿ ರಾಷ್ಟ್ರಗಳು ಮತ್ತು ಇರಾನ್‌ನಲ್ಲಿ ಮತ್ತಷ್ಟು ಸಾವು ಮತ್ತು ನೋವು ಸಂಭವಿಸುವುದನ್ನು ನಿಲ್ಲಿಸಬೇಕು ಎಂದು ರಷ್ಯಾ ಒತ್ತಿ ಹೇಳಿದೆ.

ಉಭಯ ಕಡೆಯಿಂದ ತಕ್ಷಣವೇ ಯುದ್ಧ ನಿಲ್ಲಿಸಬೇಕು. ಮಿಲಿಟರಿ ಪ್ರದರ್ಶನ ಬಿಟ್ಟು, ರಾಜತಾಂತ್ರಿಕ ಮಾತುಕತೆ ಮೂಲಕ ಬಿಕ್ಕಟ್ಟು ಪರಿಹರಿಸಿಕೊಳ್ಳಬೇಕು ಎಂದು ರಷ್ಯಾ ಕರೆ ನೀಡಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಯಾಗುತ್ತಿರುವ ಮಧ್ಯೆ ರಷ್ಯಾ ಹೇಳಿಕೆ ಬಿಡುಗಡೆ ಮಾಡಿದೆ. ಜಾಗತಿಕ ನಾಯಕರು ಮತ್ತು ಸಂಸ್ಥೆಗಳು, ಸಂಘರ್ಷ ನಿಲ್ಲಿಸಿ ಶಾಂತಿ ಕಾಪಾಡುವಂತೆ ಒತ್ತಾಯಿಸಿವೆ. ಈ ಸಂಘರ್ಷ ತೀವ್ರಗೊಂಡರೆ ಮತ್ತಷ್ಟು ಆರ್ಥಿಕ ನಷ್ಟ ಮತ್ತು ಸಾವು ನೋವು ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಿವೆ.

Leave a Reply

Your email address will not be published. Required fields are marked *

error: Content is protected !!