ಉದಯವಾಹಿನಿ, ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಇಂದು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.
ನಾಲ್ಕು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ದೆಹಲಿಗೆ ತೆರಳಿ, ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದರೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ದೆಹಲಿಗೆ ತೆರಳದೆ ಬೆಂಗಳೂರಿನಲ್ಲೇ ಉಳಿದಿದ್ದರು.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರನ್ನು ಡಾ.ಜಿ. ಪರಮೇಶ್ವರ್ ಅವರು ಇಂದು ಖರ್ಗೆ ಅವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಸುಮಾರು ಹೊತ್ತು ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಭೇಟಿ ನಂತರ ಖರ್ಗೆ ಅವರ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ನಾವು ಖರ್ಗೆ ಅವರು, ಒಂದೇ ಕುಟುಂಬವಿದ್ದಂತೆ. ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ನಾನು ಭೇಟಿ ಮಾಡುತ್ತೇನೆ. ಅವರು ನನ್ನ ಹಿರಿಯಣ್ಣ ಇದ್ದಂತೆ. ಅವರ ಆರೋಗ್ಯ ವಿಚಾರಿಸಿದ್ದೇನೆ ಅಷ್ಟೇ ಎಂದರು.ಈ ಭೇಟಿಯಲ್ಲಿ ನಾನು ಯಾವುದೇ ರಾಜಕೀಯ ಚರ್ಚೆ ಮಾತನಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಾನು ಖರ್ಗೆ ಮನೆ ಒಳಗೆ ಹೋದ ಮೇಲೆ ಮಕ್ಕಳು, ಮರಿ ಎಲ್ಲರನ್ನು ಮಾತನಾಡಿಸುತ್ತಾ ಕೂರುತ್ತೇನೆ. ಪ್ರಿಯಾಂಕ ಖರ್ಗೆ ಅವರನ್ನು ಸಣ್ಣವರಿದ್ದಾಗಿನಿಂದಲೇ ನೋಡುತ್ತಾ ಬಂದಿದ್ದೇನೆ. ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರದು ನನ್ನದು ೪೫ ವರ್ಷಗಳ ಗೆಳೆತನ. ಹಾಗಾಗಿ ನಾನು ಹೆಚ್ಚು ಹೊತ್ತು ಅವರ ಮನೆಯಲ್ಲಿರುತ್ತೇನೆ. ಏನೆ ಇರಲಿ ನಾನು ರಾಜಕೀಯ ವಿಚಾರವನ್ನಂತೂ ಚರ್ಚೆ ಮಾಡಿಲ್ಲ ಎಂದು ಪುನರುಚ್ಛರಿಸಿದರು.
