ಉದಯವಾಹಿನಿ, ಬೆಂಗಳೂರು: ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯನ್ನು ಕಲ್ಪಿಸಿದ್ದು ಇಂದು ಸಂಜೆ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ರಾಷ್ಟ್ರೀಯ ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಧಾನಸೌಧಕ್ಕೆ ದೀಪಾಲಂಕಾರದ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಈಗ ಶಾಶ್ವತ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಅದರ ಸಿದ್ಧತೆಯನ್ನು ಪರೀಕ್ಷಿಸಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೀಪಾಲಂಕಾರವನ್ನು ಇಂದು ಸಂಜೆ 6.30ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ. ವಿಧಾನಸೌಧದ ಮುಂಭಾಗದ ಭವ್ಯ ಮೆಟ್ಟಿಲುಗಳ ಮೇಲೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೀಪಾಲಂಕಾರವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ವಿಧಾನಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಧಾನಸೌಧದ ಸೌಂದರ್ಯ ಇಮ್ಮಡಿಗೊಳಿಸುವಂತಹ ಬಹುವರ್ಣದ ದೀಪಾಲಂಕಾರವನ್ನು ಸಂಜೆ ವೇಳೆ ಮಾಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಮಹಾತ್ಮ ಗಾಂಧಿ ಜಯಂತಿ, ಗಣರಾಜ್ಯೋತ್ಸವ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ದೀಪಾಲಂಕಾರ ಇರಲಿದೆ.
ಈಗಾಗಲೇ ಶಾಶ್ವತ ದೀಪಾಲಂಕಾರದ ಪರೀಕ್ಷೆಯನ್ನು ಸಂಜೆ ವೇಳೆ ಮಾಡಲಾಗಿದೆ. ಈ ಹಿಂದೆ ದೀಪಾಲಂಕಾರ ಮಾಡಿದ್ದ ಸಂದರ್ಭದಲ್ಲಿ ಪ್ರವಾಸಿಗರು ಹಾಗೂ ಬೆಂಗಳೂರಿಗರು ಅದರ ಸೌಂದರ್ಯ ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಅಂಬೇಡ್ಕರ್ ಬೀದಿ ಪ್ರವಾಸಿಗರ ಸಂಖ್ಯೆಯಿಂದ ತುಂಬಿ ತುಳುಕುತ್ತಿತ್ತು. ಇದನ್ನು ಮನಗಂಡು ಶಾಶ್ವತ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ.
