ಉದಯವಾಹಿನಿ, ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಲೋಕಸಭಾ ಚುನಾವಣೆ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.ಕನಕಪುರದಲ್ಲಿ ರೂರಲ್‌ ಎಜುಕೇಷನ್‌ ಸೊಸೈಟಿ ಸ್ಥಾಪಕ ಅಧ್ಯಕ್ಷ, ಮಾಜಿ ಶಾಸಕ ಎಸ್‌‍.ಕರಿಯಪ್ಪ ಅವರ 121 ನೇ ಜನದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಭಾಗವಹಿಸಿದ್ದರು.
ಸಂಸದ ಡಾ.ಸಿ.ಎನ್‌.ಮಂಜುನಾಥ್‌ರವರು ಪತ್ನಿಸಹಿತವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರನ್ನು ಡಿ.ಕೆ.ಶಿವಕುಮಾರ್‌ ಆತೀಯವಾಗಿ ಬರಮಾಡಿಕೊಂಡು ಪಕ್ಕದಲ್ಲೇ ಕೂರಿಸಿಕೊಂಡರು. ನಂತರ ಇಬ್ಬರೂ ನಾಯಕರು ಪರಸ್ಪರ ಉಭಯಕುಶಲೋಪರಿ ವಿಚಾರಿಸಿಕೊಂಡು, ಹಾಸ್ಯ ಚಟಾಕಿ ಹಾರಿಸುತ್ತಾ ಮಾತನಾಡುತ್ತಿದ್ದುದು ಕಂಡುಬಂದಿತು.
ವೇದಿಕೆಗೆ ಆಗಮಿಸುತ್ತಿದ್ದಂತೆ ಡಿ.ಕೆ.ಶಿವಕುಮಾರ್‌ರವರು ಮಂಜುನಾಥ್‌ರವರಿಗೆ ಮೊಬೈಲ್‌ನಲ್ಲಿ ಯಾವುದೋ ಮಾಹಿತಿಯನ್ನು ತೋರಿಸಿ ಸುದೀರ್ಘ ವಿವರಣೆ ನೀಡಿದರು. ಮಂಜುನಾಥ್‌ರವರು ಅದಕ್ಕೆ ಹೆಚ್ಚು ಆಸಕ್ತಿ ತೋರಿಸಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದುದು ಕಂಡುಬಂದಿತು.
ಬಳಿಕ ವಾಣಿಜ್ಯ ಸಂಕೀರ್ಣ ಉದ್ಘಾಟನೆ, ಎಸ್‌‍.ಕರಿಯಪ್ಪನವರ ಸಾಕ್ಷ್ಯಚಿತ್ರ ಬಿಡುಗಡೆ ಹಾಗೂ ಪ್ರದರ್ಶನದ ಕಾರ್ಯಕ್ರಮದ ವೇದಿಕೆಯಲ್ಲಿ ಮಂಜುನಾಥ್‌ ಮತ್ತು ಡಿ.ಕೆ.ಶಿವಕುಮಾರ್‌ ಅಕ್ಕಪಕ್ಕದಲ್ಲಿಯೇ ಕುಳಿತುಕೊಂಡರು. ವೇದಿಕೆಯಲ್ಲಿ ಇಬ್ಬರ ನಡುವೆ ಸುದೀರ್ಘ ಸಮಾಲೋಚನೆ ಕಂಡುಬಂದಿತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಸಿ.ಎನ್‌.ಮಂಜುನಾಥ್‌, ಡಿ.ಕೆ.ಶಿವಕುಮಾರ್‌ರವರ ಸಹೋದರ ಡಿ.ಕೆ.ಸುರೇಶ್‌ರವರನ್ನು ಸೋಲಿಸಿದರು. ತಮನ ಸೋಲಿನ ಬಗ್ಗೆ ಡಿ.ಕೆ.ಶಿವಕುಮಾರ್‌ ಹಲವಾರು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!