ಉದಯವಾಹಿನಿ, ಕೆಂಭಾವಿ: ತುಮಕೂರು ಜಿಲ್ಲೆಯ ಮೂಲದ ಯುವ ಹವ್ಯಾಸಿ ಕಲಾವಿದರೊಬ್ಬರು ರಾಜ್ಯದ ವಿವಿಧೆಡೆ ಅಯೋಧ್ಯ ನಗರದ ರಾಮಮಂದಿರದ ಮಾದರಿಯನ್ನು ಸಾಮಾನ್ಯ ಜನರಿಗೂ ತೋರಿಸುವ ಕಾಯಕದಲ್ಲಿ ತೊಡಗಿದ್ದಾರೆ.ಹವ್ಯಾಸಿ ಕಲಾವಿದ ಹಾಗೂ ಅಧ್ಯಾತ್ಮ ಚಿಂತಕ ವಿನಯರಾಮ ಹಳೆಮನೆ ಅವರು, ಥರ್ಮಾಕೋಲ್ ಬಳಸಿ ಅಯೋಧ್ಯೆಯ ಶ್ರೀರಾಮಮಂದಿರದ ಮಾದರಿಯ ಪ್ರತಿಕೃತಿಯನ್ನು ಇಲ್ಲಿನ ಕೆಂಭಾವಿಯ ಉತ್ತರಾದಿ ಮಠದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟಿದ್ದಾರೆ.
ವಿನಯರಾಮ ಹಳೆಮನೆ ಅವರು ರಾಜ್ಯದ ವಿವಿಧ ಭಾಗದ 79 ಕಡೆ ಮಂದಿರದ ಪ್ರತಿಕೃತಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದು ಸದ್ಯ ಕೆಂಭಾವಿಯ ಉತ್ತರಾದಿ ಮಠದ ಸಮುದಾಯ ಭವನದಲ್ಲಿನ ಪ್ರದರ್ಶನವು 80ನೇಯದ್ದಾಗಿದೆ. ರಾಮನವಮಿಯಾದ ಏ.6 ರಂದು ಪ್ರದರ್ಶನ ಕೊನೆಗೊಳ್ಳಲಿದೆ.
80 ಕೆ.ಜಿ ಥರ್ಮಾಕೋಲ್, ಟೂತ್‌ಪೀಕ್, ಅಕಾಲಿಕ ವಾಟರ್ ಪೇಂಟ್, ಗುಂಡುಪಿನ್ ಹಾಗೂ ಫೆವಿಕಲ್ ಬಳಸಿ ನಿರ್ಮಿಸಿರುವ ಮಂದಿರವು
ವಿದ್ಯುತ್ ದೀಪಗಳ ಅಲಂಕಾರಗಳಿಂದ ಕಂಗೊಳಿಸುತ್ತಿದೆ. ರಾಜ್ಯದ ವಿವಿಧೆಡೆ ಒಟ್ಟು 108 ಕಡೆ ಪ್ರತಿಕೃತಿ ಪ್ರದರ್ಶಿಸುವ ಗುರಿ ಹೊಂದಿರುವ ವಿನಯರಾಮ ಹಳೆಮನೆ ಅವರು, ಸ್ವಂತ ಖರ್ಚಿನಲ್ಲಿ ಎಲ್ಲೆಡೆ ಪ್ರದರ್ಶನಕ್ಕೆ ಇಡುತ್ತಿದ್ದಾರೆ.
