ಉದಯವಾಹಿನಿ, ವಾಷಿಂಗ್ಟನ್: ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ನಡೆಸಿದ್ದ ಪಾಕಿಸ್ತಾನ ಮೂಲದ ಉಗ್ರ ಹಾಗೂ ದಾಳಿಯ ಪ್ರಮುಖ ಆರೋಪಿ ತಹವೂರ್ ರಾಣಾನನ್ನು ಅಮೇರಿಕಾ ಕೊನೆಗೂ ಗಡೀಪಾರು ಮಾಡಿದೆ.ನಾಳೆ ಬೆಳಗ್ಗೆ ತಹವೂರ್ ರಾಣಾ ಭಾರತಕ್ಕೆ ಆಗಮಿಸಲಿದ್ದು, ದೆಹಲಿಯ ಅತ್ಯಂತ ಬಿಗಿ ಭದ್ರತೆ ಇರುವ ತಿಹಾರ್ ಜೈಲು ಹಾಗೂ ಮುಂಬೈಗೆ ಕರೆತರಲಾಗುತ್ತದೆ. ಕೊನೆ ಕ್ಷಣದವರೆಗೂ ಅವರನ್ನು ಎಲ್ಲಿಡಲಾಗುತ್ತದೆ ಎಂಬ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ. ಈ ಬೆಳವಣಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕ ಬಹುದೊಡ್ಡ ರಾಜತಾಂತ್ರಿಕ ಗೆಲುವು ಎಂದು ಹೇಳಲಾಗಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಎನ್‌ಐಎ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಹಸ್ತಾಂತರ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಂಡಿದ್ದಾರೆ.
ಗುಪ್ತಚರ ಮತ್ತು ತನಿಖಾ ಅಧಿಕಾರಿಗಳ ವಿಶೇಷ ತಂಡ ಈಗಾಗಲೇ ಅಮೆರಿಕದಿಂದ ವಿಮಾನದಲ್ಲಿ ಕರೆದುಕೊಂಡು ಬರುತ್ತಿದ್ದು ನಾಳೆ ಬೆಳಿಗ್ಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದ ನ್ಯಾಯಾಲಯದ ಶಿಫಾರಸುಗಳಿಗೆ ಅನುಗುಣವಾಗಿ, ದೆಹಲಿ ಮತ್ತು ಮುಂಬೈನ ಎರಡು ಜೈಲುಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಜಾರಿ ಮಾಡಲಾಗಿದೆ. ಭಾರತಕ್ಕೆ ಬಂದ ನಂತರ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಿದೆ. 2019ರಿಂದ ಮೋದಿ ಸರ್ಕಾರವು ರಾಣಾನನ್ನು ಭಾರತಕ್ಕೆ ಕರೆತರುವ ಪ್ರಯತ್ನ ಮಾಡುತ್ತಿತ್ತು. ಸತತ ಪ್ರಯತ್ನದ ಫಲವಾಗಿ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಣಾನನ್ನು ಭಾರತಕ್ಕೆ ಕಳುಹಿಸಲು ಒಪ್ಪಿಗೆ ನೀಡಿದ್ದಾರೆ.
