ಉದಯವಾಹಿನಿ, ಕೋಲಾರ: ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿ ಗ್ರಾಮದಲ್ಲಿ ರುವ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವವು ವಿಶ್ವಾವಸು ಸಂವತ್ಸರದ ಚೈತ್ರ ಮಾಸದ ಹುಣ್ಣಿಮೆಯಂದು ವೈಭವವಾಗಿ ನಡೆಯಿತು. ಗೋವಿಂದ, ಗೋವಿಂದ ಎಂದು ಸ್ಮರಿಸುತ್ತಾ ಸಹಸ್ರಾರು ಭಕ್ತರು ಬೃಹತ್‌ರಥವನ್ನು ಎಳೆದು ಕೃತಾರ್ಥರಾದರು.
ರಥೋತ್ಸವದ ಅಂಗವಾಗಿ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗಿನಿಂದಲೇ ದೂರದ ಊರಿನ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಕೈವಾರದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಯನ್ನು ತಂದು, ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಶ್ರೀಯೋಗಿನಾರೇಯಣ ಮಠದ ವತಿಯಿಂದ ಶ್ರೀ ಕೃಷ್ಣ ಗಂಧೋತ್ಸವ ವಿಶೇಷ ಸೇವೆಯನ್ನು ಧರ್ಮಾಧಿಕಾರಿಗಳಾದ ಡಾ. ಎಂ.ಆರ್. ಜಯರಾಮ್ ದಂಪತಿಗಳು ಶ್ರದ್ದಾ ಭಕ್ತಿಗಳಿಂದ ನೇರವೇರಿಸಿದರು. ರಥೋತ್ಸವದ ಅಂಗವಾಗಿ ರಥಶಾಂತಿ, ರಥಪೂಜೆ, ಹೋಮ, ಪುರ್ಣಾಹುತಿಯನ್ನು ಸಮರ್ಪಿಸಲಾಯಿತು.
ಶ್ರೀಕೃಷ್ಣ ಗಂಧೋತ್ಸವ ಸೇವೆಯ ನಂತರ ಆಸ್ಥಾನ ಸೇವೆಯನ್ನು ನೇರವೇರಿಸಿ, ಅಲಂಕೃತಗೊಂಡಿದ್ದ ರಥಕ್ಕೆ ಶ್ರೀದೇವಿ, ಭೂದೇವಿ ಸಮೇತ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಗಳನ್ನು ಉತ್ಸವ ಪಲ್ಲಕ್ಕಿಯಲ್ಲಿ ವೇದ ಘೋಷದಲ್ಲಿ ಕರೆತರಲಾಯಿತು. ರಥದಲ್ಲಿ ದೇವರನ್ನು ಇಡುತ್ತಿದ್ದಂತೆಯೇ ಗೋವಿಂದ ನಾಮಸ್ಮರಣೆ ಮುಗಿಲು ಮುಟ್ಟಿತು. ಭಕ್ತರು ತೇರು ಬಾಳೆಹಣ್ಣು, ಧವನ ತೇರಿಗೆ ಅರ್ಪಿಸಿ ಹರಿಕೆ ಸಲ್ಲಿಸಿದರು.
ಬಿಸಿಲಿನ ಬೇಗೆಯನ್ನು ತಣಿಸಲು ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಮಜ್ಜಿಗೆ, ಪಾನಕ ಕೊಸಂಬರಿ ಹಂಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಉಚಿತವಾಗಿ ನೀರಿನ ಪ್ಯಾಕೆಟ್ ಗಳನ್ನು ಸಹ ಹಂಚುತ್ತಿದ್ದರು. ನಾದಸ್ವರ, ತಮಟೆ ವಾದ್ಯದೊಂದಿಗೆ ರಥೋತ್ಸವವು ಸಾಗಿತು.
