ಉದಯವಾಹಿನಿ, ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಮುಂದಾಗಿರುವುದು ಒಂದು ಕಪಟ ನಾಟಕ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ನಮ್ಮ ಪಕ್ಷದ ಹೋರಾಟದಿಂದ ಬೆದರಿರುವ ಕಾಂಗ್ರೆಸ್ ಇದೇ 17ರಂದು ಕೇಂದ್ರದ ವಿರುದ್ಧ ಹೋರಾಟ ಮಾಡಲು ಮುಂದಾಗಿದೆ. ಇದು ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ, ಕಾಂಗ್ರೆಸ್‌ನವರ ಹೋರಾಟ ಕಪಟ ನಾಟಕ ಎಂದು ವಾಗ್ದಾಳಿ ನಡೆಸಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸದ ಅವರು, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರದ ವಿರುದ್ಧ ನೀವು ಎಷ್ಟೇ ಹೋರಾಟ ಮಾಡಿದರೂ ಜನ ನಂಬುವುದಿಲ್ಲ, ನಿಮ್ಮ ಹೋರಾಟದ ಪ್ರಯತ್ನ ಸಫಲವಾಗುವುದಿಲ್ಲ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸಿದ ಹೋರಾಟದಲ್ಲಿ ಮೊದಲ ಹಂತದ ಜನಾಕ್ರೋಶ ಯಾತ್ರೆ ಯಶಸ್ವಿಯಾಗಿದೆ ಏಪ್ರಿಲ್ 1, 3ರಂದು ಸರ್ಕಾರದ ಬೆಲೆ ಏರಿಕೆ ವಿರುದ್ಧ ಯಶಸ್ವಿ ಅಹೋರಾತ್ರಿ ಧರಣಿ ನಡೆಸಿದ್ದೆವು. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಪಕ್ಷದ ಎಲ್ಲ ನಾಯಕರೂ ಯಾತ್ರೆ ಭಾಗವಹಿಸಿದ್ದರು ಎಂದು ಸಮರ್ಥನೆ ಮಾಡಿಕೊಂಡರು.
ರಾಜ್ಯಾದ್ಯಂತ ಬೆಲೆಯೇರಿಕೆ ವಿರುದ್ಧ ಹೋರಾಟ ಮಾಡಿದ್ದೇವೆ. ಮೂರು ಹಂತಗಳಲ್ಲಿ ಜನಾಕ್ರೋಶ ಯಾತ್ರೆ ನಡೆಸುತ್ತಿದ್ದೇವೆ. ಮೊದಲ ಹಂತದ ಜನಾಕ್ರೋಶ ಯಾತ್ರೆ ಐದು ದಿನಗಳ ಕಾಲ ಒಂಭತ್ತು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಜನಾಕ್ರೋಶ ಯಾತ್ರೆಗೆ ನಮ್ಮೆಲ್ಲ ನಾಯಕರೂ ಬಂದಿದ್ದರು. ಆಯಾಯಾ ಭಾಗದ ನಾಯಕರು ಸಹಕರಿಸಿದ್ದಾರೆ. ಜನಾಕ್ರೋಶ ಯಾತ್ರೆಯಲ್ಲಿ 115 ಕಿ.ಮೀ ಪ್ರವಾಸ ಮಾಡಿದ್ದೇವೆ ಎಂದು ಹೇಳಿದರು.
