ಉದಯವಾಹಿನಿ, ಬೆಂಗಳೂರು : ದೇಶಾದ್ಯಂತ ಎಸಿಪಿ, ಟಿಎಸ್‌ಪಿ ಕಾನೂನುಗಳನ್ನು ಜಾರಿಗೆ ಮಾಡಿದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮೊದಲಿಗನಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ದೇಶದಲ್ಲೇ ಆಂಧ್ರಪ್ರದೇಶ ಹೊರತುಪಡಿಸಿದರೆ ಕರ್ನಾಟಕ ಸರ್ಕಾರ ಎರಡನೆಯದಾಗಿ ಎಸ್ ಸಿಪಿ, ಟಿಎಸ್ ಪಿ ಜಾರಿಗೆ ತಂದಿದೆ. ಜನಸಂಖ್ಯೆಗನುಗುಣವಾಗಿ ಹಣ ಬಳಕೆ ಮಾಡುತ್ತಿದ್ದೇವೆ. ಇದನ್ನು ಮರೆಮಾಚಲು ಬಿಜೆಪಿಯವರು ಪರಿಶಿಷ್ಟರ ಅಭಿವೃದ್ಧಿಗೆ ಹಣವನ್ನು ಬೇರೆ ರೀತಿ ವರ್ಗಾವಣೆ ಮಾಡಲಾಗಿದೆ ಎಂದು ಟೀಕೆ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯದಲ್ಲಿ ಎಸ್ ಸಿಪಿ, ಟಿಎಸ್ ಪಿ ಕಾಯ್ದೆಯಿಲ್ಲ, ಟೀಕೆ ಮಾಡುವ ಬಿಜೆಪಿಯು ಕೇಂದ್ರದಲ್ಲಿ ಕೇಂದ್ರದಲ್ಲಿ ಎಸ್ ಸಿಪಿ, ಟಿಎಸ್ ಪಿಯನ್ನು ಜಾರಿಗೊಳಿಸಲಿ ಎಂದು ಸವಾಲು ಹಾಕಿದರು. ಈ ಹಿಂದೆ ಪರಿಶಿಷ್ಟ ಜಾತಿ/ಪಂಗಡದವರಿಗೆ ಕಡಿಮೆ ಹಣ ನಿಗದಿ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ ಕಾಯ್ದೆ ತಂದ ಪರಿಣಾಮ ಈ ವರ್ಷ 32 ಸಾವಿರ ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಬಡ್ತಿ ಮೀಸಲಾತಿಗೆ ಇಡೀ ದೇಶದಲ್ಲೇ ನಾವು ಕಾಯ್ದೆ ರೂಪಿಸಿದ್ದೇವೆ. ಬಿಜೆಪಿಯವರು ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ಎಂದರು.
ಮಹಿಳೆಯರಿಗೆ, ಪರಿಶಿಷ್ಟರಿಗೆ, ಶೋಷಿತರಿಗೆ ಸಮಾನತೆ ನೀಡುವ ಆಶಯವನ್ನು ಸಂವಿಧಾನ ಹೊಂದಿದೆ. ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಉದ್ದೇಶ ಕೂಡ ಸಮಾನತೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಜನರಿಗೆ ಖರೀದಿಸುವ ಶಕ್ತಿ ಇಲ್ಲದೇ ಹೋದರೆ ಆರ್ಥಿಕ ಚಟುವಟಿಕೆಗಳು ಕುಸಿಯುತ್ತದೆ ಎಂದು ಹೇಳಿದರು.
