ಉದಯವಾಹಿನಿ, ಬೆಂಗಳೂರು : ರಾಜ್ಯದಲ್ಲಿ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ, ಟ್ರಕ್ ಹಾಗೂ ಗೂಡ್ಸ್ ವಾಹನಗಳು ನಿನ್ನೆ ಮಧ್ಯರಾತ್ರಿಯಿಂದಲೇ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿರುವುದರಿಂದ ಸರಕು ಸಾಗಾಣಿಕೆಯಲ್ಲಿ ವ್ಯತ್ಯಯವಾಗಿದೆ.
ರಾಜ್ಯಾದ್ಯಂತ ಸರಕು ಸಾಗಾಣಿಕೆ ವಾಹನಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಹೊರರಾಜ್ಯಗಳಿಂದ ಯಾವುದೇ ರೀತಿಯ ಸರಕು ಸಾಗಾಣಿಕೆಯ ಲಾರಿಗಳು ಕರ್ನಾಟಕಕ್ಕೆ ಆಗಮಿಸುತ್ತಿಲ್ಲ.
ನಿರಂತರ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಲಾರಿ ಮುಷ್ಕರದಿಂದ ಉಂಟಾಗಿರುವ ಸರಕು ಸಾಗಾಣಿಕೆ ವ್ಯತ್ಯಯದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜಲ್ಲಿ, ಮರಳು, ಕಲ್ಲು, ಸಿಮೆಂಟು, ಕಬ್ಬಿಣ ಮತ್ತಿತರೆ ವಸ್ತುಗಳ ಸಾಗಾಟ ಸ್ಥಗಿತಗೊಂಡಿದೆ. ಹಾಲು, ಔಷಧಿ, ತರಕಾರಿ ಹೊರತುಪಡಿಸಿ ಎಲ್ಲಾ ವಸ್ತುಗಳ ಸಾಗಾಟ ನಿಂತುಹೋಗಿದೆ. ಮಾರುಕಟ್ಟೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲೆಡೆ ಲಾರಿಗಳು, ಗೂಡ್ಸ್ ವಾಹನಗಳು ನಿಂತಲ್ಲೇ ನಿಂತಿವೆ.
ಮುಷ್ಕರಕ್ಕೆ ಸುಮಾರು 69 ಸಂಘಟನೆಗಳು ಬೆಂಬಲ ನೀಡಿದ್ದು 6 ಲಕ್ಷ ಲಾರಿಗಳು ಸಂಚಾರ ಸ್ತಬ್ದಗೊಳಿಸಿವೆ ಎಂದು ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.
ಡೀಸೆಲ್ ಮೇಲೆ ಹೆಚ್ಚು ತೆರಿಗೆ ವಿಧಿಸಿದ್ದರಿಂದ ನಮ್ಮ ಉದ್ಯಮ ತೀವ್ರ ಸಂಕಷ್ಟಕ್ಕೆ ಈಡಾಗಿದೆ. ಕೂಡಲೇ ಡೀಸೆಲ್ ದರ ಇಳಿಸಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು, ಟೋಲ್‌ಗಳಲ್ಲಿ ಪೊಲೀಸರು ಲಾರಿ ಚಾಲಕರಿಗೆ ನೀಡುವ ಕಿರುಕುಳ ತಪ್ಪಿಸಬೇಕು, ವಾಹನ ವಿಮೆಯ ದರ ಕಡಿತಗೊಳಿಸುವುದು, ಎಫ್‌ಸಿ ದರ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತಾದರೂ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
