ಉದಯವಾಹಿನಿ, ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಕಳ್ಳ ಸಾಗಾಣಿಕೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್. ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದರೆ, ಅಂತಹ ಆಸ್ಪತ್ರೆಗಳ ಪರವಾನಗಿಯನ್ನು ಲೈಸೆನ್ಸ್ ಅನ್ನು ಮುಲಾಜಿಲ್ಲದೆ ರದ್ದುಗೊಳಿಸಬೇಕು ಎಂದು ದೇಶದ ಎಲ್ಲಾ ರಾಜ್ಯಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣಗಳ ನಿರ್ವಹಣೆಯ ಬಗ್ಗೆ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತಗೆದುಕೊಂಡ ಸುಪ್ರೀಂ ಕೋರ್ಟ್, ಅಂತಹ ಅಪರಾಧಗಳನ್ನು ತಡೆಯಲು ರಾಜ್ಯಗಳು ಅನುಸರಿಸಬೇಕಾದ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಪಾಲಿಸುವಂತೆಯೂ ತಾಕೀತು ಮಾಡಿದೆ.
ಮಕ್ಕಳ ಕಳ್ಳಸಾಗಣೆ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರಿದ್ದ ಪೀಠವು ಅಂತಹ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕೆಳ ನ್ಯಾಯಾಲಯಗಳಿಗೆ ಆದೇಶಿಸಿದೆ. ಯಾವುದೇ ನವಜಾತ ಶಿಶುವನ್ನು ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಗಿಯನ್ನು ಮುಲಾಜಿಲ್ಲದೆ ಅಮಾನತುಪಡಿಸುವಂತೆಯೂ ಎಲ್ಲಾ ರಾಜ್ಯಗಳಿಗೆ ಆದೇಶ ಮಾಡಿದೆ.
ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕಳ್ಳಸಾಗಣೆ ಮಾಡಿದರೆ ಮೊದಲ ಹಂತವಾಗಿ ಅಂತಹ ಆಸ್ಪತ್ರೆಗಳ ಪರವಾನಿಗೆಯನ್ನು ಅಮಾನತುಗೊಳಿಸಬೇಕು. ಇದನ್ನು ಹಗುರವಾಗಿ ಪರಿಗಣಿಸಿದರೆ, ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆಯನ್ನು ಕೊಟ್ಟಿದೆ.ಮಕ್ಕಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ವಿಚಾರಣೆಗೆ ಕರೆಯಲು ದೇಶಾದ್ಯಂತದ ಹೈಕೋ ರ್ಟ್ ಗಳಿಗೆ ನಿರ್ದೇಶಿಸಲಾಗಿದೆ. ನಂತರ 6 ತಿಂಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲು ಮತ್ತು ದಿನನಿತ್ಯದ ವಿಚಾರಣೆಯನ್ನು ನಡೆಸಲು ನಿರ್ದೇಶನಗಳನ್ನು ನೀಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಉತ್ತರಪ್ರದೇಶದಲ್ಲಿ ಗಂಡು ಮಗು ಬೇಕೆಂದು ದಂಪತಿಗೆ ಕಳ್ಳಸಾಗಣೆ ಮಾಡಲಾದ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಆರೋಪಿಗಳಿಗೆ ಅಲಹಾಬಾದ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆರೋಪಿಗಳ ಜಾಮೀನು ರದ್ದುಗೊಳಿಸುವಾಗ, ಅಲಹಾಬಾದ್ ಹೈಕೋರ್ಟ್ ಮತ್ತು ಯುಪಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
