ಉದಯವಾಹಿನಿ, ಯರಗೋಳ (ಯಾದಗಿರಿ): ವ್ಯಾಪ್ತಿಯ ಹತ್ತಿಕುಣಿ ಗ್ರಾಮದಲ್ಲಿ ಕಳೆದ 3 ದಿನಗಳಿಂದ ಕುಡಿಯುವ ನೀರು ಪೂರೈಸುವ ಮೋಟರ್ ಸುಟ್ಟಿದ್ದು.ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಪರಿಣಾಮ ಗ್ರಾಮಸ್ತರು ಮಂಗಳವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಗ್ರಾಮದ ಮುಖಂಡ ಚಂದ್ರಶೇಖರ ಪಾಟೀಲ ನೇತೃತ್ವದಲ್ಲಿ ಗ್ರಾಮಸ್ಥರು ಪಂಚಾಯಿತಿಗೆ ಆಗಮಿಸಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಆಗಮಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟು ಹಿಡಿದು 2ಗಂಟೆಗಳ ಕಾಲ ಅಲ್ಲಿಯೇ ಠಿಕಾಣಿ ಹೂಡಿದರು.ಕೊನೆಗೆ ಗ್ರಾಮಸ್ಥರ ಆಕ್ರೋಶ ಅರಿತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಣ್ಣ, ಪಂಚಾಯಿತಿಗೆ ಆಗಮಿಸಿ ಯಂತ್ರಗಳು ಸುಟ್ಟಿರುವ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಗ್ರಾಮಸ್ಥರು ಸಿಟ್ಟಿಗೆದ್ದು ಸರ್ಕಾರ ನಿಮಗೆ ನಮ್ಮ ತೆರಿಗೆ ಹಣದಲ್ಲಿ ವೇತನ ಕೊಡುತ್ತದೆ. 3ದಿನಗಳಿಂದ ವಿದ್ಯುತ್ ಸರಿಯಾಗಿ ಪೂರೈಕೆಯಾಗುತ್ತಿಲ್ಲ ಯಂತ್ರಗಳು ದುರಸ್ತಿ ಮಾಡಿಲ್ಲ. 2 ದಿನಗಳಲ್ಲಿ ಗ್ರಾಮದಲ್ಲಿ ಹಜರತ್ ಬಂದಗಿ ಸಾಹೇಬ್ ಭಾವೈಕ್ಯತೆ ಜಾತ್ರೆ ಇದೆ.
ಗ್ರಾಮದಲ್ಲಿ 10ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಗ್ರಾಮಕ್ಕೆ ಬೇರೆ ನಗರಗಳಿಂದ ಸಾವಿರಾರು ಜನರು ಮರಳಿದ್ದಾರೆ. ಹಳ್ಳದಲ್ಲಿ ಸಂಗ್ರಹವಿರುವ ಮಲೀನ ನೀರು ಅನಿವಾರ್ಯವಾಗಿ ತೆಗೆದುಕೊಂಡು ಬಂದು, ಉಪಯೋಗಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳು ಉದ್ಭವಿಸಿದರೇ ಅದಕ್ಕೆ ಯಾರೂ ಕಾರಣರು ಎಂದು ಪ್ರಶ್ನಿಸಿದರು.
