ಉದಯವಾಹಿನಿ, ಬೆಂಗಳೂರು: ಮೆಟ್ರೊ ಕಾಮಗಾರಿ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಆಟೊ ಚಾಲಕ ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಗರದ ಕೋಗಿಲು ಕ್ರಾಸ್ ಬಳಿ ಸಂಭವಿಸಿದೆ. ಲಾರಿಯಲ್ಲಿ ಸಾಗಿಸುತ್ತಿದ್ದ ವಯಾಡಕ್ಟ್ (ಬೃಹತ್ ತಡೆಗೋಡೆ) ಉರುಳಿ ಬಿದ್ದ ಪರಿಣಾಮ ಆಟೊ ಚಾಲಕ ಖಾಸಿಂ ಸಾಬ್ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ತಡರಾತ್ರಿ ಏರ್‌ಪೋರ್ಟ್ ಮಾರ್ಗದ ಮೆಟ್ರೊ ಕಾಮಗಾರಿಗೆ ಬಳಸಲು ವಯಾಡಕ್ಸ್ ಕೊಂಡೊಯ್ಯುತ್ತಿದ್ದ ಲಾರಿ ತಿರುವು ಪಡೆಯುವಾಗ ಅವಘಡ ಸಂಭವಿಸಿದೆ. ಅವಘಡದ ಮುನ್ಸೂಚನೆ ಅರಿತ ಪ್ರಯಾಣಿಕ ತಕ್ಷಣ ಆಟೊದಿಂದ ಇಳಿದಿದ್ದಾರೆ. ಆದರೆ, ಖಾಸೀಂ ಸಾಬ್ ಇಳಿಯುವಷ್ಟರಲ್ಲಿ ವಯಾಡೆಕ್ಟ್ ಉರುಳಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಿಡ್ಲಘಟ್ಟ ಮೂಲದ ಖಾಸೀಂ ಸಾಬ್ ಕುಟುಂಬ ಬೆಂಗಳೂರಿನಲ್ಲಿ ವಾಸವಿತ್ತು ಎಂದು ಸಹ ಚಾಲಕರು ಮಾಹಿತಿ ನೀಡಿದ್ದಾರೆ.
ಅವಘಡವನ್ನು ಕಂಡ ಜನ ಕೂಡಲೇ ರಕ್ಷಣೆಗೆ ಧಾವಿಸಿದ್ದರು. ಆದರೆ ಬೃಹದಾಕಾರದ ವಯಾಡಕ್ಸ್ ತೆರವುಗೊಳಿಸಲು ಕ್ರೇನ್ ಇರದ ಕಾರಣ ಪ್ರಯತ್ನ ವಿಫಲವಾಗಿದೆ. ಘಟನೆ ನಡೆದ ಎರಡು ಗಂಟೆಗಳ ಬಳಿ ಕ್ರೇನ್ ತರಿಸಿ ವಯಾಡಕ್ಟ್ ತೆರವುಗೊಳಿಸಿ ಮೃತದೇಹವನ್ನು ಹೊರ ತೆಗೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!