ಉದಯವಾಹಿನಿ,ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಜಾತಿ, ಜಾತಿಗಳ ನಡುವೆ ಧರ್ಮ, ಧರ್ಮಗಳ ನಡುವೆ ಬಿರುಕು ಮೂಡಿಸುವ ಕೆಲಸವನ್ನು ಇನ್ನಾದರೂ ಕೈ ಬಿಡಿ. ಇಲ್ಲವಾದರೆ ಇಷ್ಟರಲ್ಲೇ ರಾಜ್ಯದ ಜನತೆಯೇ ದಂಗೆ ಎದ್ದು ನಿಮಗೆ ಬುದ್ದಿ ಕಲಿಸುವ ಕಾಲ ದೂರವಿಲ್ಲ ಎಂಬುದನ್ನು ನೀವು ಮರೆಯದಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲ ತಾಣ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, ಕರ್ನಾಟಕ ರಾಜ್ಯದ ಒಟ್ಟು ಜನ ಕಲ್ಯಾಣದ ಬಗ್ಗೆ ಚಿಂತಿಸುವ ಬದಲು ಮತ ಬ್ಯಾಂಕನ್ನು ಕೇಂದ್ರೀಕರಿಸಿ, ಅಲುಗಾಡುತ್ತಿರುವ ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿಯ ಹೆಸರಿನಲ್ಲಿ ಗೊಂದಲಗಳನ್ನು ಸೃಷ್ಟಿಸಿ ಸಮಾಜವನ್ನು ಛಿದ್ರ ಮಾಡಲು ಹೊರಟಿರುವ ನಿಮಗೆ, ಪ್ರಧಾನಿಗಳನ್ನು ಕುರಿತು ಟೀಕಿಸುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ತಿರಗೇಟು ನೀಡಿದ್ದಾರೆ.
ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿಯ ಹೆಸರಿನಲ್ಲಿ ಪರಿಶಿಷ್ಟರೂ ಸೇರಿದಂತೆ ಇತರ ಶೋಷಿತರು ಹಾಗೂ ಬಡವರ ಹಕ್ಕು ಕಸಿಯಲಾಗುತ್ತಿದೆ ಎಂದು ಪ್ರಧಾನಿಗಳು ಹೇಳಿದ್ದಾರೆ. ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟರಿಗೆ ಶೇ.15 ರಿಂದ ಶೇ.17 ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3 ರಿಂದ ಶೇ.7 ಕ್ಕೆ ಹೆಚ್ಚಿಸಿದ್ದು ನಮ್ಮ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿಯೇ ಹೊರತು. ನಿಮ್ಮ ಆಡಳಿತ ಅವಧಿಯಲ್ಲಿ ಅಲ್ಲ ಎನ್ನುವುದು ನಿಮಗೆ ನೆನಪಿರಲಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
